ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್‌ಟಿಎಂಎಸ್ ಶಾಲೆಯ ಕಟ್ಟಡವನ್ನು ಶ್ರೀ ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರಿಸುವುದಕ್ಕೆ ಜಿಪಂ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಪಂ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡರು.
ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರೂ ಆದ ಜೆಡಿಎಸ್ ಸದಸ್ಯ ಸಿ.ಜೆ. ದ್ವಾರಕೀಶ್ ನಿಲುವಳಿ ಸೂಚನೆ ಮೂಲಕ ಈ ವಿಷಯ ಪ್ರಸ್ತಾಪಿಸಿ, ಶ್ರೀ ರಾಮಕೃಷ್ಣ ಮಠ ಮಿಷನ್ 2012 ಅ.8 ರಂದು ಸರ್ಕಾರಕ್ಕೆ ಈ ಜಾಗ ನೀಡುವಂತೆ ಮನವಿ ಸಲ್ಲಿಸುತ್ತದೆ. ಇದಾದ ಕೇವಲ 4 ತಿಂಗಳಲ್ಲಿ ಸರ್ಕಾರ ಆ ಜಾಗವನ್ನು ಮಠಕ್ಕೆ ಮಂಜೂರು ಮಾಡಿ, ಕೂಡಲೇ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಇದು ಮಹಾತಪ್ಪು. ನಗರದ ಹೃದಯ ಭಾಗದಲ್ಲಿರುವ, ಸರ್ಕಾರವೇ ನಿಗದಿ ಮಾಡಿರುವಂತೆ 21 ಕೋಟಿ ಬೆಲೆಬಾಳುವ ಹಾಗೂ ಮಾರುಕಟ್ಟೆ ದರದ ಪ್ರಕಾರ 40 ಕೋಟಿ ಬೆಲೆಬಾಳುವ ಈ ಶಾಲೆಯ ಜಾಗವನ್ನು ಯಾವುದೇ ಕಾರಣಕ್ಕೂ ಮಠಕ್ಕೆ ಹಸ್ತಾಂತರಿಸಬಾರದು ಎಂದು ಆಗ್ರಹಿಸಿದರು.
ಸರ್ಕಾರಿ ಕಚೇರಿ ನಡೆಸಿ: ನಮಗೆ ಆಶ್ರಮದ ಬಗ್ಗೆ ಗೌರವವಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ನಾವು- ನೀವು ಕಾರ್ಯಕ್ರಮ ನಡೆಸುವ ನಾವು ಅದನ್ನು ಮುಚ್ಚುವುದು ಸರಿಯಲ್ಲ. ಸರ್ಕಾರವೇ ಹತ್ತಾರು ಕಚೇರಿಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದೆ. ಹೀಗಿರುವಾಗ ಆ ಶಾಲೆಯಲ್ಲಿ ಸರ್ಕಾರ ಕಚೇರಿಗಳನ್ನೇ ನಡೆಸಬಹುದಿತ್ತಲ್ಲ ಎಂದು ಅವರು ಕೇಳಿದರು.
ಹಿಂದೆ ಆ ಶಾಲೆಯನ್ನು ಡಿಡಿಪಿಐ ಕಚೇರಿಗೆ ನೀಡಲು, ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನೀಡಲು ಸರ್ಕಾರ ಒಪ್ಪಿರಲಿಲ್ಲ. ಹೀಗಿರುವಾಗ ಈಗ ಖಾಸಗಿಯವರಿಗೆ ನೀಡುವುದು ಏಕೆ? ಆ ಶಾಲೆಯಲ್ಲಿ ನಡೆಯುತ್ತಿರುವ ಜ್ಞಾನಬುತ್ತಿ ಸಂಸ್ಥೆಯಿಂದ ಸಾವಿರಾರು ಮಂದಿಗೆ ಸರ್ಕಾರಿ ಉದ್ಯೋಗ ದೊರೆತಿದೆ. ಮೈಸೂರಿನ ಕೊಳಚೆ ಪ್ರದೇಶದ ಯುವತಿಯೊಬ್ಬಳು ಕೆಎಎಸ್ ಪಾಸ್ ಮಾಡಿ, ಈಗ ಕೊರಟಗೆರೆಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದಾರೆ. ಹೀಗಿರುವಾಗ ನಾವು ಪ್ರೋತ್ಸಾಹ ನೀಡಬೇಕೆ ಹೊರತು ತೊಂದರೆ ಮಾಡಬಾರದು ಎಂದು ಹೇಳಿದರು.
ಜೆಡಿಎಸ್‌ನ ಹಿರಿಯ ಸದಸ್ಯ ಸಿ.ಟಿ. ರಾಜಣ್ಣ ಮಾತನಾಡಿ, ಸರ್ಕಾರದ ಈ ನಿರ್ಧಾರ ದುರ್ದೈವವಾದುದು. ವಿವೇಕಾನಂದರು ಭೇಟಿ ನೀಡಿದ್ದಕ್ಕೆ ಸ್ಮಾರಕ ಅವಶ್ಯಕ. ಆದರೆ ಅದಕ್ಕಾಗಿ ಸರ್ಕಾರಿ ಶಾಲೆಯನ್ನು ಬಂದ್ ಮಾಡುವುದು ಸರಿಯಲ್ಲ. ಅಲ್ಲಿ ಮಹಿಳಾ ಹಾಸ್ಟೆಲ್ ತೆರೆಯಿರಿ ಎಂದು ಸಲಹೆ ಮಾಡಿದರು.
ಅಂಗಾಂಗ ಕಿತ್ತು ಹಾಕುತ್ತಿರುವ ಸರ್ಕಾರ ಈಗಿನ ಜಿಪಂ ಬೇಕಾ ಎಂಬ ಬಗ್ಗೆ ಯೋಚಿಸಲಿ. ಜಿಪಂ ಗಮನಕ್ಕೆ ತಾರದೇ ಈ ರೀತಿಯ ನಿರ್ಧಾರ ಸರಿಯಲ್ಲ ಎಂದು ಮಾಜಿ ಅಧ್ಯಕ್ಷೆ ಜೆ. ಸುನೀತಾ ವೀರಪ್ಪಗೌಡ ಹೇಳಿದರು.
ಬಡಮಕ್ಕಳಿಗೆ ಅನುಕೂಲವಾಗುತ್ತಿರುವ ಸರ್ಕಾರಿ ಶಾಲೆ ಹಾಗೂ ಜ್ಞಾನಬುತ್ತಿ ಸಂಸ್ಥೆಯನ್ನು ತೆರವು ಮಾಡಿಸುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಕೆ. ಮಾರುತಿ ಹೇಳಿದರು.
ರಾಜ್ಯ ಸರ್ಕಾರ ಜಿಪಂ ಅನ್ನು ನಾಮ್ ಕೇ ವಾಸ್ತೆ ಎಂಬಂತೆ ನೋಡುತ್ತಿದೆ. ಇದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಶಾಲೆಯ ಜಾಗವನ್ನು ಆಶ್ರಮಕ್ಕೆ ನೀಡಬಾರದು ಎಂದು ಮಾಜಿ ಉಪಾಧ್ಯಕ್ಷೆಯಾದ ಕಾಂಗ್ರೆಸ್‌ನ ನಂದಿನಿ ಚಂದ್ರಶೇಖರ್ ಹೇಳಿದರು.
ಸರ್ಕಾರದ ನಿರ್ಧಾರ ಜನರ ಆಶೋತ್ತರಗಳಿಗೆ ವಿರುದ್ಧವಾದುದು. ಯಾರೋ ಭೇಟಿ ನೀಡಿದ್ದಕ್ಕೆ ಸ್ಮಾರಕ ಮಾಡುತ್ತೇವೆ ಎನ್ನುವುದಾದಲ್ಲಿ ದಲಿತರಿಗೆ ಕೊಡಿ ನಾವು ಸ್ಮಾರಕ ಮಾಡುತ್ತೇವೆ. ಸರ್ಕಾರ ಜನರ ಆಸ್ತಿ ರಕ್ಷಿಸಬೇಕೆ ಹೊರತು ಈ ರೀತಿ ಮಾಡಬಾರದು. ನಾನು ಕೂಡ ಜ್ಞಾನಬುತ್ತಿ ಸಂಸ್ಥೆಯಲ್ಲಿ ತರಬೇತಿ ಪಡೆದು, ಕೆಎಎಸ್ ಪರೀಕ್ಷೆ ತೆಗೆದುಕೊಂಡಿದ್ದಾಗಿ ಕಾಂಗ್ರೆಸ್ ಸದಸ್ಯ ಗರ್ಗೇಶ್ವರಿ ಮಹದೇವ್ ಹೇಳಿದರು.
ಎನ್‌ಟಿಎಂಎಸ್ ಶಾಲೆಯ ಹಸ್ತಾಂತರ ವಿರೋಧಿಸಿ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಿದ್ದು, ಅಲ್ಲಿಯವರೆಗೆ ಡಿಡಿಪಿಐ ಯಥಾಸ್ಥಿತಿ ಕಾಪಾಡಬೇಕು ಎಂದು ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಹೇಳಿದರು.
ಆದಿಶ್ರೀಗೆ ಶ್ರದ್ಧಾಂಜಲಿ: ಇತ್ತೀಚೆಗೆ ನಿಧನರಾದ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಗೌರವಾರ್ಥ ಸಭೆಯ ಆರಂಭದಲ್ಲಿ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷೆ ಎಂ.ಕೆ. ಸುಚಿತ್ರಾ, ಸಿಇಒ ಡಾ.ಎಂ.ಎನ್. ಅಜಯ್ ನಾಗಭೂಷಣ್ ಇದ್ದರು.