ಬಹುಮಹಡಿ ಬಿಡಿ; ಬೊಕ್ಕಸಕ್ಕೆ ಕಾಸು ಕೊಡಿ

Updated on: 

ಮೈಸೂರು:ಅರಮನೆ ನಗರಿ ಮೈಸೂರಿನಲ್ಲಿ ಬಹುಮಹಡಿ ವಾಹನ ನಿಲುಗಡೆ (ಮಲ್ಟಿ ಲೇವಲ್ ಪಾರ್ಕಿಂಗ್) ವ್ಯವಸ್ಥೆ ಜಾರಿಯಾಗಲು ಇನ್ನಷ್ಟು ವರ್ಷ ಕಾಯಬೇಕಾಗಿದೆ. ಪಾರ್ಕಿಂಗ್ ಸಮಸ್ಯೆ ಎದುರಾದಾಗ ಹಲವು ಬಾರಿ ಈ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದ್ದ ಪಾಲಿಕೆಯವರು (ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು) ಈಗ ಮೌನವಹಿಸಿದ್ದಾರೆ.
ಪ್ರತಿ ದಿನ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಜತೆಗೆ ನಗರದಲ್ಲಿ ಪಾರ್ಕಿಂಗ್ ಸ್ಥಳಾವಕಾಶದ ಅಭಾವ ಏರ್ಪಡುತ್ತಿದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ನಗರಪಾಲಿಕೆಯು ತನ್ನ ಬೊಕ್ಕಸ ತುಂಬಿಸಿಕೊಳ್ಳಲು ನೆರವಾಗುವಂತಹ ನಿರ್ಧಾರ ಕೈಗೊಳ್ಳುತ್ತಿದೆ. ಇದರಲ್ಲಿ ಪೇ ಅಂಡ್ ಪಾರ್ಕಿಂಗ್ ಕೂಡ ಸೇರಿದೆ.
ನಗರದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದ ಪಾಲಿಕೆಯು ಪೇ ಅಂಡ್ ಪಾರ್ಕಿಂಗ್ ಅಂತಹ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ, ಇದಕ್ಕೆ ಅಗತ್ಯವಾದ ಸ್ಥಳಾವಕಾಶ ಒದಗಿಸದೇ ಜಾರಿಕೊಳ್ಳುತ್ತಿದೆ. ಈಗಿರುವ ಸ್ಥಳಾವಕಾಶದಲ್ಲಿ ವಾಹನ ನಿಲುಗಡೆಗೆ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳುತ್ತಿರುವುದು ವಿಪರ್ಯಾಸ.
ಪುರಭವನದಲ್ಲಿ: ಸದ್ಯಕ್ಕೆ ಮೈಸೂರಿನ ಹೃದಯಭಾಗದಲ್ಲಿರುವ ಪುರಭವನ ಆವರಣದಲ್ಲಿ ಒಂದು ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಕಟ್ಟಡದಲ್ಲಿ ಸುಮಾರು 500 ವಾಹನಗಳನ್ನು ನಿಲ್ಲಿಸಬಹುದಾಗಿದೆ.
ಮೈಸೂರು ಮೃಗಾಲಯದ ಬಳಿ ಬಹುಮಹಡಿ ವಾಹನ ಕಟ್ಟಡ ನಿರ್ಮಿಸುವ ಪ್ರಸ್ತಾವನೆಯು ಬಹುದಿನಗಳಿಂದ ಕಡತದಲ್ಲಿ ಉಳಿದಿರುವುದು ಮತ್ತೊಂದು ವಿಶೇಷ. ಮೃಗಾಲಯದ ಎದುರಿನ ಜಾಗವು ಪಾಲಿಕೆಗೆ ಸೇರಿದ್ದು, ಲೀಸ್ ಆಧಾರದ ಮೇಲೆ ಮೃಗಾಲಯಕ್ಕೆ ನೀಡಲಾಗಿದೆ. ಈ ಜಾಗವನ್ನು ಸಂಪೂರ್ಣವಾಗಿ ಮೃಗಾಲಯಕ್ಕೆ ವಹಿಸಿಕೊಡಬೇಕು ಅಥವಾ ಲೀಸ್ ಅವಧಿಯನ್ನು 99 ವರ್ಷಕ್ಕೆ ಹೆಚ್ಚಿಸಿಕೊಟ್ಟರೇ ಮೃಗಾಲಯ ವತಿಯಿಂದಲೇ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸುವುದಾಗಿ ಮೃಗಾಲಯದವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಆದರೆ, ಈ ಬಗ್ಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಾಗ ತಮ್ಮದಲ್ಲ ಎಂಬ ಕಾರಣಕ್ಕಾಗಿ ಮೃಗಾಲಯ ಪ್ರಾಧಿಕಾರದವರೂ ಸುಮ್ಮನಿದ್ದಾರೆ. ಒಂದು ವೇಳೆ ಜಾಗವನ್ನು ಮೃಗಾಲಯಕ್ಕೆ ಕೊಟ್ಟರೇ ಬಹುಮಹಡಿ ವಾಹನ ಕಟ್ಟಡ ನಿರ್ಮಾಣವಾಗುತ್ತದೆ, ಇದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಎಲ್ಲೆಲ್ಲಿ ಅಗತ್ಯ?: ಭವಿಷ್ಯದ ದೃಷ್ಟಿಯಿಂದ ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ಪ್ರಮುಖ ವಾಣಿಜ್ಯ ರಸ್ತೆಗಳು, ಜನ ಹೆಚ್ಚಾಗಿ ಬಂದು ಹೋಗುವ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ದಸರಾ ವಸ್ತುಪ್ರದರ್ಶನ, ಮೃಗಾಲಯ, ಚಾಮುಂಡಿಬೆಟ್ಟ, ಅರಮನೆ ಸಮೀಪದಲ್ಲಿ, ಚರ್ಚ್‌ಗಳು... ಹೀಗೆ ಹಲವೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿದೆ. ಪ್ರಸ್ತುತ ರಸ್ತೆಬದಿಯಲ್ಲಿ ಸ್ವಲ್ಪ ಜಾಗ ಮೀಸಲಿಟ್ಟು ವಾಹನ ನಿಲ್ಲಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಿದರೆ ಭವಿಷ್ಯದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸಬಹುದಾಗಿದೆ.
ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬಹುಮಹಡಿ ವಾಹನ ನಿಲುಗಡೆ ಅಗತ್ಯವಾಗಿವೆ.
ಪುರಭವನ ಆವರಣದಲ್ಲಿ ಮಾತ್ರ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತಿದೆ. ಮೃಗಾಲಯ ಇತರೆಡೆ ಕಟ್ಟಡ ನಿರ್ಮಾಣ ಸಂಬಂಧ ಚಿಂತಿಸಲಾಗಿದೆ. ಉಳಿದಂತೆ ನಮ್ಮ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎನ್ನುತ್ತಾರೆ ನಗರಪಾಲಿಕೆಯ ಅಧಿಕಾರಿಗಳು.
- ಬಿ. ಶೇಖರ್ ಗೋಪಿನಾಥಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com