ಸುಸಜ್ಜಿತ ಕಲಾ ಗ್ಯಾಲರಿ ಆರಂಭಿಸಲು ಆಗ್ರಹ

Updated on: 

ಮೈಸೂರು: ಮೈಸೂರಿನಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ಆರಂಭಿಸಬೇಕು ಎಂದು ಹಿರಿಯ ವನ್ಯಜೀವಿ ಛಾಯಾಗ್ರಾಹಕ ಎಸ್. ತಿಪ್ಪೇಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ಬುಧವಾರ ಕೊ.ಸು. ನರಸಿಂಹಮೂರ್ತಿ ಅವರ ಕೈಲಾಸದ ಹಾದಿಯಲ್ಲಿ- 3ನೇ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಈ ಹಿಂದೆ ದಸರಾ ವಸ್ತು ಪ್ರದರ್ಶನ ಕಟ್ಟಡವಿದ್ದ ವೈದ್ಯಕೀಯ ಕಾಲೇಜು ಕಟ್ಟಡದಲ್ಲಿ ಕಲಾ ಗ್ಯಾಲರಿ ನಿರ್ಮಾಣಕ್ಕೆ ಸೂಕ್ತ ಜಾಗವಿತ್ತು. ಆದರೆ ವಸ್ತು ಪ್ರದರ್ಶನ ದೊಡ್ಡಕೆರೆ ಮೈದಾನಕ್ಕೆ ಸ್ಥಳಾಂತರಗೊಂಡ ನಂತರ ಅದನ್ನು ವೈದ್ಯಕೀಯ ಕಾಲೇಜಿಗೆ ಬಿಟ್ಟುಕೊಡಲಾಯಿತು. ಹೀಗಾಗಿ ನಗರದಲ್ಲಿ ಅತ್ಯುತ್ತಮ ಕಲಾ ಗ್ಯಾಲರಿಯ ಆರಂಭಕ್ಕೆ ಇದ್ದ ಅವಕಾಶ ಕೈತಪ್ಪಿ ಹೋಯಿತು. ಈ ಬಗ್ಗೆ ಕಲಾವಿದರು ಹೋರಾಟ ಮಾಡಲಿಲ್ಲ ಎಂದು ವಿಷಾದಿಸಿದರು.
ಪ್ರಸ್ತುತ ಸಯ್ಯಾಜಿರಾವ್ ರಸ್ತೆಯಲ್ಲಿರುವ ಶ್ರೀ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಕಟ್ಟಡಕ್ಕಿಂತ ಪಕ್ಕದಲ್ಲಿರುವ ಲಿಡ್ಕರ್ ಕಚೇರಿಯ ಕಟ್ಟಡ ಕಲಾ ಗ್ಯಾಲರಿ ನಿರ್ಮಾಣಕ್ಕೆ ಸೂಕ್ತವಾಗಿದೆ. ಅಲ್ಲಿ ನೆರಳು- ಬೆಳಕಿನ ಸಂಯೋಜನೆ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟರು.
ಕಲೆಗೆ ಹೆಸರುವಾಸಿ: ಮೈಸೂರು ಸಾಂಪ್ರದಾಯಿಕ ಕಲೆಗೆ ಹೆಸರುವಾಸಿ. ಇಲ್ಲಿ ಹತ್ತಾರು ಕಲಾವಿದರು ಹೆಸರು ಮಾಡಿದ್ದಾರೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಇಡೀ ಏಷ್ಯಾ ಖಂಡದಲ್ಲಿಯೇ ಕರ್ನಾಟಕದವರು ಹೆಸರು ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಸಿ.ವಿ. ಕೇಶವಮೂರ್ತಿ ಅವರು ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೈನ್ ಅವರ ಭಾಷಣ ಕೇಳಿ ಕೇಳಿ ಅವರ ಚಾಲಕ ಕೂಡ ವಿಜ್ಞಾನದ ಬಗ್ಗೆ ಭಾಷಣ ಮಾಡುವ ಹಂತಕ್ಕೆ ಬೆಳೆದಿದ್ದನ್ನು ವಿವರಿಸಿದರು.
ಆರ್.ಕೆ. ಕ್ರಿಯೇಟರ್ಸ್ ನಿರ್ಮಾಣದ ಬೆಟ್ಟದಪುರದ ಎ.ಎಸ್. ಪ್ರಸನ್ನ ಅವರ ಸಿಡಿಲಸಿರಿ- ದೀಪಾವಳಿ ವೈಭವ ಆಡಿಯೋ- ವಿಡಿಯೋ ಸಿ.ಡಿಗಳನ್ನು ಸಿ.ವಿ. ಕೇಶವಮೂರ್ತಿ ಅವರು ಲೋಕಾರ್ಪಣೆ ಮಾಡಿದರು. ಕಿರಣ್ ಶಂಕರ್ ವಂದಿಸಿದರು. ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ, ವಕೀಲ ಪಿ.ಜೆ. ರಾಘವೇಂದ್ರ, ಹುಣಸೂರಿನ ಕಲಾವಿದ ಕುಮಾರ್ ಅರಸೇಗೌಡ ಮೊದಲಾದವರು ಇದ್ದರು.
ಕೊ.ಸು. ನರಸಿಂಹಮೂರ್ತಿ ಅವರು ಕ್ರಮವಾಗಿ ವಿವೇಕಾನಂದ ನಗರದ ಭರಣಿ ಕಲಾ ಗ್ಯಾಲರಿ, ಸರಸ್ವತಿಪುರಂನ ಸಬ್‌ರಂಗ್‌ನಲ್ಲಿ ಮೊದಲೆರಡು ಪ್ರದರ್ಶನ ಏರ್ಪಡಿಸಿದ್ದರು. ಮೂರನೇಯದಾದ ಈ ಪ್ರದರ್ಶನ ಜ.31 ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಸಾರ್ವಜನಿಕರ  ಉಚಿತ ವೀಕ್ಷಣೆಗೆ ತೆರೆದಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com