ಮೈಸೂರು: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಡಿದ ಯುವತಿಯ ಸ್ಮರಣಾರ್ಥ ಜಿಪಂ ಸದಸ್ಯರು ಮೇಣದಬತ್ತಿ ಬೆಳಗಿಸಿ ಗೌರವ ಸಲ್ಲಿಸಿದ ಘಟನೆ ಬುಧವಾರ ಮೈಸೂರು ಜಿಪಂ ಸಭೆಯಲ್ಲಿ ನಡೆಯಿತು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಜಿ ಅಧ್ಯಕ್ಷೆ, ಜೆಡಿಎಸ್‌ನ ಜೆ. ಸುನೀತಾ ವೀರಪ್ಪಗೌಡ ಅವರು ನಿಲುವಳಿ ಸೂಚನೆಯ ಮೂಲಕ ಪ್ರಸ್ತಾಪಿಸಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮದ್ಯಪಾನವೂ ಕಾರಣ. ರಾಜಕಾರಣಿಗಳು ಕೂಡ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರಿಗೇನು ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು.
ಮಾಜಿ ಉಪಾಧ್ಯಕ್ಷೆ, ಬಿಜೆಪಿಯ ಎಚ್.ಆರ್. ಭಾಗ್ಯಲಕ್ಷ್ಮಿ, ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕ ಕೆ. ಮಾರುತಿ, ಮಂಜುಳಾ ರಾಜ್, ನಂದಿನಿ ಚಂದ್ರಶೇಖರ್, ಡಾ.ಪುಷ್ಪಾವತಿ ಅಮರನಾಥ್, ಜೆಡಿಎಸ್‌ನ ಕಲ್ಪನಾ ಧನಂಜಯ, ಪಕ್ಷೇತರ ಸದಸ್ಯ ಎಲ್. ಮಾದಪ್ಪ ಮಾತನಾಡಿದರು. ಮಹಿಳೆಯರ ಮೇಲಿನ ದೌರ್ಜನ್ಯಗಳು ನಮ್ಮೂರಿನಲ್ಲಿಯೂ ನಡೆಯುತ್ತಿವೆ ಎಂದು ಮಂಜುಳಾ ರಾಜ್, ಮಹಿಳೆಯರಿಗೆ ಸ್ವಾತಂತ್ರ್ಯ ಮಾತ್ರ ಸಾಲದು, ರಕ್ಷಣೆ ಕೊಡಿ ಎಂದು ನಂದಿನಿ, ಹಳ್ಳಿಗಳಲ್ಲಿ ದೌರ್ಜನ್ಯ ಪ್ರಕರಣಗಳನ್ನು ದುಡ್ಡು ಕೊಟ್ಟು ಮುಚ್ಚಿ ಹಾಕುವ, ಪೊಲೀಸರು ಇದಕ್ಕೆ ಸಹಕರಿಸುವ ಪ್ರಕರಣಗಳನ್ನು ನಡೆಯುತ್ತಿದ್ದು, ಗಂಭೀರವಾಗಿ ಪರಿಗಣಿಸುವಂತೆ ಡಾ.ಪುಷ್ಪಾವತಿ, ಈ ರೀತಿಯ ಪ್ರಕರಣಗಳು ಪುರುಷರು ತಲೆತಗ್ಗಿಸುವಂಥದ್ದು ಎಂದು ಮಾದಪ್ಪ ಹೇಳಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ಣಯ ಕಳುಹಿಸಲು ನಿರ್ಧರಿಸಲಾಯಿತು. ಡಾ.ಪುಷ್ಪಾವತಿ ಅವರ ಸಲಹೆ ಮೇರೆಗೆ ಮಹಿಳಾ ಸದಸ್ಯರು ಎಲ್ಲರಿಗೂ ಮೇಣದಬತ್ತಿ ನೀಡಿ, ಅಧ್ಯಕ್ಷರ ಪೀಠದ ಎದುರು ಬೆಳಗಿಸಿ, ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಮೃತಪಟ್ಟ ದೆಹಲಿಯು ಯುವತಿಗೆ ಗೌರವ ಸಲ್ಲಿಸಿದರು.