ಚುಂಚನಗಿರಿಶ್ರೀಗಳು ದೇಶಕ್ಕೇ ಮಾದರಿ

Updated on: 

ಕೆ.ಆರ್. ನಗರ: ಸಂತರು, ಸಾಧುಗಳು ಮತ್ತು ಸಾಧಕರಿಗೆ ಸಾವಿಲ್ಲ. ಅವರ ಧರ್ಮಕಾರ್ಯಗಳು ಸಮಾಜಮುಖಿ ಚಿಂತನೆಗಳು ಅಜರಾಮರ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿಗಳ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಗಳು ಒಂದೇ ಜಾತಿಗೆ ಸೀಮಿತರಾಗದೆ ಸರ್ವಧರ್ಮದ ಜನರನ್ನು ಸಮಾನರಾಗಿ ಕಂಡ ಮಹಾನ್ ಸಂತ ಎಂದು ಬಣ್ಣಿಸಿದರು.
ಶ್ರೀಮಠ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ಪೀಠಾರೋಹಣ ಮಾಡಿದ ಬಾಲಗಂಗಾಧರ ಶ್ರೀಗಳು ಮಠವನ್ನು ಆಕಾಶದೆತ್ತರಕ್ಕೆ ಬೆಳೆಸುವುದರ ಜತೆಗೆ ಬಡವರಿಗೆ, ದೀನ ದಲಿತರಿಗೆ ಅಕ್ಷರ ಅನ್ನದಾಸೋಹ ಮಾಡಿದರು. ಅವರ ದೂರದೃಷ್ಟಿತ್ವ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಠದ ಶಾಖೆ ಆರಂಭಿಸಿದ್ದು, ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದರು.
ಜನಪರ ಕಾಳಜಿ: ಶಾಸಕ ಸಾ.ರಾ. ಮಹೇಶ್ ಮಾತನಾಡಿ, ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಶ್ರೀಗಳಲ್ಲಿ ಮಾನವೀಯ ಮೌಲ್ಯಗಳು ಮಿಳಿತವಾಗಿದ್ದು, ಮಠದ ಉತ್ತರಾಧಿಕಾರಿ ಆಯ್ಕೆಯಲ್ಲಿ ತೋರಿಸಿದ ಜಾಣ್ಮೆ, ಮಠವನ್ನು ಬೆಳೆಸಿದ ಪರಿ, ಸಮಾಜದ ಬಗ್ಗೆ ಅವರಿಗಿದ್ದ ಜನಪರ ಕಾಳಜಿಗೆ ಸಾಕ್ಷಿ ಎಂದು ಹೇಳಿದರು.
ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸುವುದೆ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದರಲ್ಲದೆ, ಕೃಷ್ಣರಾಜನಗರದ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ಶ್ರೀಗಳ ಹೆಸರನ್ನು ನಾಮಕರಣ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸೋಣ ಎಂದು ಸಲಹೆ ನೀಡಿದರು.
ಡೋರ್ನಹಳ್ಳಿ ಚರ್ಚ್‌ನ ಫಾದರ್ ಗಿಲ್ಬರ್ಟ್ ಡಿಸಿಲ್ವಾ, ಮಾಜಿ ಶಾಸಕ ತೋಂಟದಾರ್ಯ, ಕೆ.ಸಿ. ಪುಟ್ಟಸಿದ್ದಶೆಟ್ಟಿ, ಟಿ.ಕೆ. ಚಿನ್ನಸ್ವಾಮಿ, ಪುರಸಭಾಧ್ಯಕ್ಷ ತಮ್ಮನಾಯಕ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ, ಮೂಳೆತಜ್ಞ ಡಾ.ಮೆಹಬೂಬ್‌ಖಾನ್, ಕಾಂಗ್ರೆಸ್ ಮುಖಂಡರಾದ ಅನುರಾಧಾ ಮಹದೇವ್, ಸಮಾಜ ಸೇವಕ ಅಚ್ಚುತಾನಂದ ಮಾತನಾಡಿ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಶ್ರದ್ಧಾಜಂಲಿ ಸಭೆಯಲ್ಲಿ, ಮಾಜಿ ಸಚಿವ ಎಸ್.ನಂಜಪ್ಪ, ಎಂ.ಟಿ. ಅಣ್ಣೇಗೌಡ, ಚಂದ್ರಶೇಖರ್, ರಾಜಯ್ಯ, ಕಲ್ಪನ ಧನಂಜಯ, ಶ್ರೀನಿವಾಸಗೌಡ, ಜಿ.ಎನ್. ಮಲ್ಲೆಗೌಡ, ಎ.ಎಸ್. ಚನ್ನಬಸಪ್ಪ, ಡಾ.ಎಸ್.ಪಿ. ಯೋಗಣ್ಣ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com