ಮೈಸೂರು: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಸಂಯುಕ್ತವಾಗಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 116ನೇ ಜಯಂತಿ ಪ್ರಯುಕ್ತ ಬುಧವಾರ ನಗರದಲ್ಲಿ ವಿದ್ಯಾರ್ಥಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ರಾಮಸ್ವಾಮಿ ವೃತ್ತದಿಂದ ಆರಂಭವಾದ ಜಾಥಾಗೆ ಎಐಡಿಎಸ್ಒ ರಾಜ್ಯ ಉಪಾಧ್ಯಕ್ಷ ಬಿ. ರವಿ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಜಾಥಾವು ಚಾಮರಾಜ ಜೋಡಿ ರಸ್ತೆಯ ಮೂಲಕ ಮನ್ಮಹಾರಾಜ ಸಂಸ್ಕೃತ ಪಾಠಶಾಲೆವರೆಗೆ ಜಾಥಾ ನಡೆಸಲಾಯಿತು. ನಗರದ ಅವಿಲಾ ಕಾನ್ವೆಂಟ್, ಮಹಾರಾಜ ಕಾಲೇಜು, ದಳವಾಯಿ ಪ್ರೌಢಶಾಲೆ, ಶ್ರೀಕಾಂತ ಲಲಿತಕಲಾ ಮಂದಿರ, ಅಕ್ಕನ ಬಳಗ ಶಾಲೆಯ ಮಕ್ಕಳು ಜಾಥಾದಲ್ಲಿ ಭಾಗವಹಿಸಿ ರಾಷ್ಟ್ರಪ್ರೇಮ ಬಿಂಬಿಸುವ ಉಕ್ತಿಗಳ ನಾಮಫಲಕ ಹಿಡಿದು ಘೋಷಣೆ ಕೂಗಿದರು.