ಸಾಹಿತ್ಯದ ಮೇಲೆ ಯಾಮುನಾಚಾರ್ಯರ ಪ್ರಭಾವ

Updated on: 

ಮೈಸೂರು: ಸಾವಿನ ಗಾಢತೆಯ ಬಗ್ಗೆ ತಿಳಿದುಕೊಳ್ಳಲು ಹೋದಾಗ ಯಾಮುನಾಚಾರ್ಯರ ಪರಿಚಯವಾಯಿತು. ನಂತರ ಅವರು ನನ್ನಲ್ಲಿ ಅಂತರ್ಗತವಾಗಿ ಹೋದರು. ಹೀಗಾಗಿ ನನ್ನ ಸಾಹಿತ್ಯದ ಮೇಲೆ ಯಾಮುನಾಚಾರ್ಯರ ಪ್ರಭಾವವಿದೆ ಎಂದು ಪ್ರಸಿದ್ಧ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ಮಹಾರಾಜ ಕಾಲೇಜು ತತ್ವಶಾಸ್ತ್ರ ವಿಭಾಗವು ಬುಧವಾರ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಪ್ರೊ.ಎಂ. ಯಾಮುನಾಚಾರ್ಯರ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಹಾಗೂ ಪ್ರಣಾಮ ಪುಷ್ಪಂ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾನು 9ನೇ ವಯಸ್ಸಿನಲ್ಲಿ ನನ್ನ ಅಕ್ಕ, ಅಣ್ಣ ಒಂದೇ ದಿನ ತೀರಿಕೊಂಡರು. 11ನೇ ವಯಸ್ಸಿನಲ್ಲಿ ತಾಯಿ ತೀರಿಕೊಂಡರು, 15ನೇ ವಯಸ್ಸಿನಲ್ಲಿ ನನ್ನ ತಮ್ಮ ಸತ್ತುಹೋದ. ಪ್ಲೇಗ್ ರೋಗದಿಂದ ಸತ್ತು ಹೋದವರನ್ನು ನನ್ನ ಹೆಗಲ ಮೇಲೆ ಹೊತ್ತು ಸಮಾಧಿ ಮಾಡಿ ಬಂದೆ. ಅಲ್ಲಿಂದ ನನಗೆ ಸಾವಿನ ಅರ್ಥದ ಬಗ್ಗೆ ಪ್ರಶ್ನೆ ಕಾಡಲಾರಂಭಿಸಿತು. ಆಗ ಪರಿಚಯವಾದವರೆ ಪ್ರೊ.ಎಂ. ಯಾಮುನಾಚಾರ್ಯರು ಎಂದರು.
ಇಂಟರ್‌ಮೀಡಿಯೇಟ್ ಮುಗಿಸಿ ಆನರ್ಸ್‌ಗೆ ಅರ್ಜಿ ಸಲ್ಲಿಸಿ ಮಹಾರಾಜ ಕಾಲೇಜಿಗೆ ಬಂದೆ. ಯಾಮುನಾಚಾರ್ಯರ ಭಾಷಣ ಕೇಳಿದ್ದ ನಾನು ಕಣ್ಣಾರೆ ಕಂಡೆ. ಆಗ ಅವರ ಬಳಿ ಸಾವಿನ ಗಾಢತೆಯ ಬಗ್ಗೆ ಕೇಳಿದೆ. ತಕ್ಷಣ ತತ್ವಶಾಸ್ತ್ರದ ಪುಸ್ತಕಗಳನ್ನು ನೀಡಿ ಇದನ್ನು ಓದು ತಿಳಿಯುತ್ತದೆ ಎಂದರು. ಒಂದೆರಡು ಓದಿದೆ ಅರ್ಥವಾಗಲಿಲ್ಲ. ಪುನಃ ಅವರ ಹೋಗಿ ಅರ್ಥವಾಗದ್ದನ್ನು ಹೇಳಿಕೊಂಡೆ. ನೀನು ಕ್ರಮಬದ್ಧವಾಗಿ ಓದು. ನಮ್ಮ ಭಾರತೀಯ ಉಪನಿಷತ್ತು ಸಂವಾದ ರೂಪದಲ್ಲಿವೆ. ಅವುಗಳನ್ನು ನಾಟಕ ಓದುತ್ತಿದ್ದೇನೆ ಎಂದೇ ಓದು ಅರ್ಥವಾಗುತ್ತದೆ ಎಂದರು. ಆಗಿನಿಂದ ನಾನು ತತ್ವಶಾಸ್ತ್ರ ಓದಲು ಆರಂಭಿಸಿದೆ, ಕಠೋಪನಿಷತ್ತು, ಬೌದ್ಧವಾಹಿನಿ ತಿಳಿಸಿದ್ದನ್ನು ಓದಿ ಅರ್ಥ ಮಾಡಿಕೊಂಡೆ ಎಂದರು.
ನನ್ನ ಜೀವನ ತಿರುವಿಗೆ ಅವರೇ ಕಾರಣ: ತತ್ವಶಾಸ್ತ್ರ ವಿಭಾಗದಲ್ಲಿ ನನ್ನೊಂದಿಗೆ ಇಬ್ಬರು ಸಹಪಾಠಿಗಳಿದ್ದರು. ತರಗತಿಯಲ್ಲಿ ಯಾಮುನಾಚಾರ್ಯರು ಪಾಠ ಕೇಳಿ ಚೆನ್ನಾಗಿ ಓದಿದೆ. ಸಾಕ್ರೆಟೀಸ್‌ನ ಚಿಂತನೆಗಳನ್ನು ಪ್ಲೇಟೋ ಬರಹದ ಮೂಲಕ ತಿಳಿಸಿಕೊಟ್ಟ. ಅದನ್ನು ನಮ್ಮ ಗುರುಗಳು ಸರಾಗವಾಗಿ ತಿಳಿಸಿಕೊಡುತ್ತಿದ್ದರು. ಒಂದು ಪರೀಕ್ಷೆಯಲ್ಲಿ 5 ಪ್ರಶ್ನೆಗಳ ಬದಲಿಗೆ 3ಕ್ಕೆ ಉತ್ತರಿಸಿದ್ದೇ. ಅವೆಲ್ಲವೂ ಪ್ಲೇಟೋಗೆ ಸಂಬಂಧಪಟ್ಟದ್ದಾಗಿದ್ದವು. ಉಳಿದೆರಡಕ್ಕೆ ಉತ್ತರಿಸಿರಲಿಲ್ಲ. ಆದರೂ ನಮ್ಮ ಗುರುಗಳು ವಿದ್ಯಾರ್ಥಿವೇತನ ತಪ್ಪಿ ಹೋಗುತ್ತದೆ ಎಂದು ನನಗೆ 60 ಅಂಕ ನೀಡಿದರು.
ಒಮ್ಮೆ ಬನಾರಸ್ ವಿವಿಯಲ್ಲಿ ಭಾರತೀಯ ಶಿಕ್ಷಣದಲ್ಲಿನ ಮೌಲ್ಯಗಳು ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಅಲ್ಲಿ ದೇಶದ ವಿವಿಧ ವಿವಿಗಳಿಂದ ತತ್ವಶಾಸ್ತ್ರ ಪ್ರಾಧ್ಯಾಪಕರೆಲ್ಲ ಭಾಗವಹಿಸಿದ್ದರು. ಸದರಿ ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ಎಂ. ಯಾಮುನಾಚಾರ್ಯರ ಭಾಷಣ ಎಲ್ಲರನ್ನು ಬೆರಗುಗೊಳಿಸಿತ್ತು ಎಂದರು.
 ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಬಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಪಿ.ಎಸ್. ನಾಯಕ್, ಯಾಮಾನುಚಾರ್ಯರ ಪುತ್ರ ಗೋವಿಂದ ಪ್ರಸಾದ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com