ಕ.ಪ್ರ.ವಾರ್ತೆ ಮೈಸೂರು ಜು. 11
ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜೆಗೆ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಳೆದ ಬಾರಿಯಂತೆಯೇ ಲಲಿತಮಹಲ್ ಹೆಲಿಪ್ಯಾಡ್‌ನಿಂದ ಸಾರಿಗೆ ಬಸ್‌ನ ಉಚಿತ ಸೇವೆ ಕಲ್ಪಿಸಲು ತೀರ್ಮಾನಿಸಲಾಗಿದೆ.
ಮೊದಲಿಗೆ ಲಲಿತಮಹಲ್ ಹೆಲಿಪ್ಯಾಡ್‌ಗೆ ತೆರಳಿದ ಶಾಸಕರಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್ ಮತ್ತು ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು ಅಲ್ಲಿನ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು ಬಸ್ ಶೆಲ್ಟರ್‌ಗಳು, ದೇವರ ದರ್ಶನದ ಟಿಕೆಟ್ ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಲ್ಲದೆ ಪೊಲೀಸ್ ಇಲಾಖೆಗೆ 150 ಪಾಸ್‌ಗಳನ್ನು ವಿತರಿಸಲಾಗಿದ್ದು, ಸ್ಥಳೀಯ ಶಾಸಕರು ಮತ್ತು ನಗರ ಪಾಲಿಕೆ ಅಧಿಕಾರಿಗಳು ಪಾಸ್‌ಗಳಿಗೆ ಮನವಿ ಸಲ್ಲಿಸಿದರೆ ನೀಡುವುದಾಗಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ತಿಳಿಸಿದರು.
ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು, ದರ್ಶನಕ್ಕೆ ತೆರಳುವ ಮತ್ತು ಹಿಂದಿರುಗುವ ಮಾರ್ಗಗಳು, ಪ್ರಸಾದ ತಯಾರಿಕೆ, ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಉಚಿತ ಬಸ್ ಸೇವೆ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ನಗರ ಬಸ್ ನಿಲ್ದಾಣದಲ್ಲಿ ಸಂಚರಿಸುವ ಬಸ್‌ಗಳ ಜತೆಗೆ ಹೆಚ್ಚುವರಿಯಾಗಿ 50 ಬಸ್‌ಗಳನ್ನು ಬಿಡಲಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೆ ಬಸ್ ಸೇವೆ ಲಭ್ಯವಿರುತ್ತದೆ. ಆದರೆ ಬೆಳಗ್ಗೆ 5.30 ರಿಂದ ರಾತ್ರಿ 10ರವರೆಗೆ ದೇವರ ದರ್ಶನಕ್ಕೆ ಅವಕಾಶ ಇದೆ. ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮಾತನಾಡಿ, ಗಣ್ಯರ ವಾಹನಕ್ಕೆ ಪಾಸ್‌ಗಳನ್ನು ನೀಡಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಸಾರಿಗೆ ಬಸ್ ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳನ್ನು ದೇವಿಕೆರೆ ಬಳಿಯೆ ನಿಲ್ಲಿಸಬೇಕು. 150 ಮಂದಿ ಹೋಂ ಗಾರ್ಡ್ಸ್‌ಗಳು, 240 ಮಂದಿ ಪೊಲೀಸರು, 4 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದ್ದು, ಮಾಹಿತಿ ಕೇಂದ್ರ ತೆರೆಯಲಾಗಿದೆ ಎಂದರು.
ಇಂದು ಬೆಟ್ಟದಲ್ಲಿ ಲಾಡು ವಿತರಣೆ
ಮೈಸೂರು: ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕೆ.ಆರ್. ಮೊಹಲ್ಲಾದ ಶ್ರೀ ಚಾಮುಂಡೇಶ್ವರಿ ಪೂಜಾ ಸಮಿತಿಯು ಲಾಡುಗಳ ವಿತರಣೆ ಏರ್ಪಡಿಸಿದೆ. ಜು.12 ರಂದು ಬೆಳಗ್ಗೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ 6 ಸಾವಿರ ಲಾಡುಗಳನ್ನು ವಿತರಿಲಾಗುವುದು ಎಂದು ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯನ್ (ಪೇಪರ್ ಮಣಿ) ತಿಳಿಸಿದ್ದಾರೆ.
Advertisement