ಕ.ಪ್ರ. ವಾರ್ತೆ ್ಣ ಕೆ.ಆರ್. ನಗರ ್ಣ ಮಾ.29
ಸಾರ್ವಜನಿಕ ಕೆಲಸಗಳನ್ನು ಮಾಡುವುದು ಮತ್ತು ಜನತೆಗೆ ಮೂಲ ಸವಲತ್ತುಗಳನ್ನು ಒದಗಿಸುವುದು ಚುನಾಯಿತ ಜನಪ್ರತಿನಿಧಿಗಳ ಕರ್ತವ್ಯ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದು, ಸನ್ಮಾನ ಮಾಡುವುದು ಅರ್ಥಹೀನ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಇಲ್ಲಿನ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ಸ್ವ-ಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು, ಶಿವಾನುಭವ ಮಹಿಳಾ ಸಮಾಜ, ಬಸವೇಶ್ವರ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಅಕ್ಷರಶಃ ಸತ್ಯ. ಯಾವುದೇ ಸಾಧನೆ ಮಾಡಲು ಪುರುಷನಿಗೆ ಮಹಿಳೆ ಪ್ರೇರಕ ಶಕ್ತಿಯಾಗಿದ್ದು, ಆಕೆಯ ಸಹಾಯವಿಲ್ಲದೆ ಸಮಾಜದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಮತ್ತು ಏಕ ಪಾತ್ರಾಭಿನಯ ಕಾರ್ಯಕ್ರಮಗಳು ಗಮನ ಸೆಳೆದವು. ಶಾಸಕ ಸಾ.ರಾ. ಮಹೇಶ್, ಅನಿತಾ ಸಾ.ರಾ. ಮಹೇಶ್ ದಂಪತಿ ಸೇರಿದಂತೆ ಸಾಧಕರನ್ನು ಸನ್ಮಾನಿಸಿ ಗೌರವಿಸಿತು.
ಲಾಲನಹಳ್ಳಿ ಗುರುಮಲ್ಲೇಶ್ವರ ಮಠದ ಜಯದೇವಿತಾಯಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯೆ ನಳಿನಾಕ್ಷಿ ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷೆ ಗೀತಾ ಮಹೇಶ್, ಸದಸ್ಯರಾದ ಎನ್. ಶಿವಕುಮಾರ್, ಪಿ. ವಿನಯ್, ಉಮೇಶ್, ತಾಪಂ ಮಾಜಿ ಅಧ್ಯಕ್ಷ ಬಿ.ಟಿ. ಮಹದೇವ, ಶಿವಾನುಭವ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾರವೀಂದ್ರ, ಜೆಡಿಎಸ್ ತಾ. ಘಟಕದ ಅಧ್ಯಕ್ಷೆ ಭಾಗ್ಯ, ಇಂದಿರಾ ವಿದ್ಯಾರಣ್ಯ ಇದ್ದರು.