ಕ.ಪ್ರ. ವಾರ್ತೆ ್ಣ ಕೆ.ಆರ್. ನಗರ ್ಣ ಮಾ.29
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ರಾಜ್ಯದಲ್ಲಿ 40ಕ್ಕೂ ಅಧಿಕ ಸ್ಥಾನ ಗಳಿಸಲಿದ್ದು, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬನ್ನೂರು ಕುಮಾರ್ ಹೇಳಿದರು.
ಪಕ್ಷದ ಸ್ಥಾಪಕ ಬಿ. ಶ್ರೀರಾಮುಲು ಈಗಾಗಲೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಎಲ್ಲೆಡೆಯಿಂದ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆಯಲ್ಲದೆ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಕನಿಷ್ಠ ನಾಲ್ಕು ಸ್ಥಾನಗಳನ್ನು ಜಿಲ್ಲೆಯಲ್ಲಿ ಗೆಲ್ಲುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಸದಸ್ಯತ್ವ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಪಕ್ಷದ ಸಂಘಟನೆಯ ಉದ್ದೇಶದಿಂದ ನಿರಂತರವಾಗಿ ಸಭೆ ಸಮಾರಂಭ ನಡೆಸುವುದರ ಜತೆಗೆ ಪಾದಯಾತ್ರೆ ಮೂಲಕ ಮತದಾರರನ್ನು ಪಕ್ಷದತ್ತ ಸೆಳೆಯಲು ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ. ಕೆ.ಆರ್. ನಗರದಲ್ಲಿಯೂ ಶ್ರೀರಾಮುಲು ಅವರ ನೇತೃತ್ವದಲ್ಲಿ ಸಮಾವೇಶ ನಡೆಸಿ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಡಾ. ಮಹದೇವಸ್ವಾಮಿ, ಪಕ್ಷದ ಮುಖಂಡರಾದ ಧನಂಜಯ, ಸ್ವಾಮಿನಾಯಕ, ರಮೇಶ್ ಇದ್ದರು.