ಹವಾಮಾನ ವೈಪರೀತ್ಯ ತಡೆಗೆ ಪ್ರಣಾಳಿಕೆ ತಯಾರಿಸಲು ನಿರ್ಧಾರ

Updated on: 

ಕ.ಪ್ರ.ವಾರ್ತೆ ಮೈಸೂರು ಮಾ.30
ನೆಲ, ಜಲ, ಬೀಜ, ಆಹಾರ, ಶಕ್ತಿಮೂಲಗಳು, ಪರ್ಯಾಯಗಳು ಒಳಗೊಂಡಂತೆ ಹವಾಮಾನ ವೈಪರೀತ್ಯ ತಡೆಗಟ್ಟಲು ದಿಕ್ಸೂಚಿಯಾಗುವಂತಹ ಜನಪರ ಪ್ರಣಾಳಿಕೆ ತಯಾರಿಸಿ ರಾಜಕೀಯ ಪಕ್ಷಗಳಿಗೆ ನೀಡಲು ಗುರುವಾರ ಹವಾಮಾನ ವೈಪರೀತ್ಯ ಕುರಿತ ಸಿಟಿಜನ್ಸ್ ಗ್ಲೋಬಲ್ ಫ್ಲಾಟ್‌ಫೋ ಮತ್ತು ಪೀಪಲ್ಸ್ ಲೀಗಲ್ ಫೋರಂ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಾಹಿತಿ, ಜಾನಪದ ತಜ್ಞ ಪ್ರೊ. ಕಾಳೇಗೌಡ ನಾಗವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ, ನೈಸರ್ಗಿಕ ಕೃಷಿಗೆ ಬದ್ಧತೆ ಮತ್ತು ನಿರಂತರ ಪ್ರೋತ್ಸಾಹ, ವಿಶೇಷ ಆರ್ಥಿಕ ವಲಯಗಳ ವಿರುದ್ಧ ಚಳವಳಿ, ವಿದ್ಯುತ್ ಮತ್ತು ಖಾಸಗಿ ವಾಹನಗಳಿಗೆ ವಾರಕ್ಕೊಮ್ಮೆಯಾದರೂ ರಜಾ ನೀಡುವುದು, ಹೆಚ್ಚು ನೀರು ಬೇಡುವ ಕಬ್ಬು, ಬತ್ತದ ಬದಲು ಕಡಿಮೆ ನೀರು ಬೇಡುವ ಪೌಷ್ಟಿಕವಾದ ಕಿರುಧಾನ್ಯಗಳ ಬೇಸಾಯ, ಅಂತರ್ಜಲದ ಮೇಲೆ ನಿಯಂತ್ರಣ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಲೇಖನಗಳ ಪ್ರಕಟಣೆ, ತಾಲೂಕು, ಗ್ರಾಮ ಮಟ್ಟದಲ್ಲಿ ಜಾಗೃತಿ ಅಭಿಯಾನ ಒಳಗೊಂಡಂತಹ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಲಾಯಿತು.
ಈ ಕಾರ್ಯಕ್ರಮಗಳಿಗೆ ಶಿಸ್ತುಬದ್ಧ ರೂಪು ನೀಡಿ ಮುನ್ನಡೆಸಲು ಸಮಿತಿಯೊಂದನ್ನು ರಚಿಸಲು ಸಭೆ ತೀರ್ಮಾನಿಸಿತು. ಸಮಿತಿಯ ರಚನಾ ಪ್ರಕ್ರಿಯೆ ಜವಾಬ್ದಾರಿಯನ್ನು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪೀಪಲ್ಸ್ ಲೀಗಲ್ ಫೋರಂನ ಪಿ.ಪಿ. ಬಾಬುರಾಜ್ ಅವರಿಗೆ ವಹಿಸಲಾಯಿತು.
ಡಾ. ಮುಜಾಫರ್ ಅಸ್ಸಾದಿ, ಪ್ರೊ. ಕೆ.ಸಿ. ಬಸವರಾಜ್, ಕೆ.ಎಂ. ಪುಟ್ಟಸ್ವಾಮಿ, ಯು.ಎನ್. ರವಿಕುಮಾರ್, ಡಾ.ಎಸ್.ಎನ್. ಗಣನಾಥ, ರಾಜಶೇಖರ ನಾಯ್ಕಲ್, ಹೊಸೂರು ಕುಮಾರ್, ಸಂಜಯ್ ಹುಣಸೂರು, ರೈತ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com