ಮೈಸೂರು: ರಾಜ್ಯದ ದಲಿತ ಸಮುದಾಯದವರು ಕೇಂದ್ರ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಶಾಸಕ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ನಾಯಕರೆಂದು ಭಾವಿಸಿದ್ದೆವು. ಆದರೆ, ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಗುಲಾಮಗಿರಿ ತೋರಿಸಿ ದಲಿತರನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಅವರು ನಮ್ಮ ನಾಯಕರಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಭಾಗ್ಯರಾಜ್ ಕಿಡಿಕಾರಿದರು. ಇಷ್ಟು ವರ್ಷ ರಾಜಕೀಯ ಮಾಡಿ ಪ್ರಮುಖ ಸ್ಥಾನ ಗಿಟ್ಟಿಸಿಕೊಳ್ಳಲಾಗದ ಈ ನಾಯಕರು ದಲಿತರನ್ನು ಪ್ರತಿನಿಧಿಸುವುದು ವ್ಯರ್ಥ. ತಮಗೆ ಹಾಗೂ ತಮ್ಮ ಮಕ್ಕಳಿಗೆ ಸ್ಥಾನ ಗಿಟ್ಟಿಸಿಕೊಂಡು ಸ್ವಂತ ಬೆಳವಣಿಗೆ ಕಾಣುತ್ತಿದ್ದಾರೆ ಹೊರತು, ದಲಿತ ಸಮುದಾಯಕ್ಕಾಗಿ ಏನೂ ಮಾಡುತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವ ತಾಕತ್ತು ಪ್ರದರ್ಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನೇ ನಾವು ನಮ್ಮ ನಾಯಕರೆಂದು ಭಾವಿಸುತ್ತೇವೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.