ವ್ಯಾಪಾರದಲ್ಲಿ ಸ್ನೇಹ ಚಿಂತನೆಯಿರಲಿ

Updated on: 

ಕ.ಪ್ರ.ವಾರ್ತೆ   ಮೈಸೂರು   ಮೇ 12
ದ್ರೋಹ ಚಿಂತನೆಯ ವ್ಯಾಪಾರವು ಗ್ರಾಹಕರ ಸ್ನೇಹ ಚಿಂತನೆಯನ್ನು ಹೊಂದಿರಲಿ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಹೇಳಿದರು.
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗವು ಶುಕ್ರವಾರ ಏರ್ಪಡಿಸಿದ್ದ ತಕೋತ್ತರ ವಿದ್ಯಾರ್ಥಿ ವೇದಿಕೆಯ 2012 -13ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಾಣಿಜ್ಯ ಶಿಕ್ಷಣ ಕೇವಲ ಉದ್ಯಮ ಹಾಗೂ ಉದ್ಯಮಿಗಳ ಅಭಿವೃದ್ಧಿ ಹಾಗೂ ಇನ್ನಿತರ ವಿಷಯಗಳನ್ನು ಕುರಿತಾಗಿ ಮಾತ್ರವೇ ಇರಬಾರದು. ಅದರಲ್ಲಿ ಗ್ರಾಹಕರ ಹಿತವೂ ಒಳಗೊಂಡಿರಬೇಕು. ವ್ಯಾಪಾರ ಎಂಬುದು ದ್ರೋಹ ಚಿಂತನೆಯ ವೃತ್ತಿಯಾಗಿರಬಹುದು. ಆದರೆ ಅದು ಗ್ರಾಹಕರ ಹಿತಕ್ಕೆ ಸ್ನೇಹ ಚಿಂತನೆಯನ್ನು ನಡೆಸುವಂತಾಗಬೇಕು ಎಂದರು. ಜಾಗತೀಕರಣದ ಹಿನ್ನೆಲೆಯಲ್ಲಿ ವ್ಯಾಪಾರ ಮಾಡಲು ಬರುವ ವಿದೇಶಿ ಕಂಪನಿಗಳಿಗೆ ಆಯಾಯ ಪ್ರಾದೇಶಿಕ ಸಂಸ್ಕೃತಿ, ಭಾಷೆ ಹಾಗೂ ಸಂಪ್ರದಾಯದ ಅರಿವಿರಬೇಕು. ಇಂತಹ ಯಾವುದೇ ಅಧ್ಯಯನ ಮಾಡದೆ ಹೋದರೆ ಅವುಗಳು ಯಶಸ್ವಿಯಾಗಲು ಸಾಧ್ಯವಿಲ್ಲ. ಈ ರೀತಿ ಬಂದ ಕಂಪನಿಗಳು ತಳವೂರದೆ ನಷ್ಟ ಮಾಡಿಕೊಂಡು ಕಾಲ್ಕಿತ್ತಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ಅವರು ತಿಳಿಸಿದರು.
ಲಾಭ ಹಾಗೂ ನಷ್ಟವಿಲ್ಲದೆ ದರವನ್ನು ನಿಗದಿಗೊಳಿಸಿ ತನ್ನ ಉತ್ಪಾದನೆ ಅಥವಾ ಮಾರಾಟ ವಸ್ತುವನ್ನು ವ್ಯಾಪಾರ ಮಾಡಬೇಕೆಂದು 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದಾರೆ. ಇಂದಿಗೂ ಅದು ಪ್ರಸ್ತುತ ಎಂದ ಅವರು, ವಾಣಿಜ್ಯ ಕ್ಷೇತ್ರದಲ್ಲಿ ಅಧ್ಯಯನಕ್ಕೆ ತೊಡಗಿದವರು ಇಂತಹ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ಪ್ರೊ.ಶಿವರಾಮು ಕಾಡನಕುಪ್ಪೆ, ವಿಭಾಗದ ಮುಖ್ಯಸ್ಥ ಡಾ. ಎಸ್. ಮರಿಗೌಡ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com