ನಾರಿಯರ ಬಂಗಾರ ಖರೀದಿ ಬಲುಜೋರು...

Updated on: 

ಕ.ಪ್ರ.ವಾರ್ತೆ   ಮೈಸೂರು   ಮೇ 13
ಸಮೃದ್ಧಿಯ ಸಂಕೇತವೆಂದೇ ನಂಬಿರುವ ಅಕ್ಷಯ ತೃತೀಯ ಅಂಗವಾಗಿ ಇಲ್ಲಿನ ವಿವಿಧ ಆಭರಣ ಮಳಿಗೆಯಲ್ಲಿ ಚಿನ್ನ ಖರೀದಿಯ ಭರಾಟೆ ಸೋಮವಾರ ಹೆಚ್ಚಾಗಿ ಕಂಡುಬಂತು.
ಮಲಬಾರ್ ಗೋಲ್ಡ್, ಜೋಸ್ ಅಲೂಕಾಸ್, ಕಲ್ಯಾಣ ಜ್ಯುವೇಲರ್ಸ್, ಭೀಮಾ ಬ್ರದರ್ಸ್, ತನಿಷ್ಕ್ ಆಭರಣ ಮಳಿಗೆ, ಶಂಕರಶೆಟ್ಟಿ ಆ್ಯಂಡ್ ಸನ್ಸ್ ಮತ್ತಿತರ ಬೃಹತ್ ಮಳಿಗೆ ಸೇರಿದಂತೆ ಬಡಾವಣೆಯಲ್ಲಿನ ವಿವಿಧ ಮಳಿಗೆಗಳಲ್ಲಿಯೂ ಚಿನ್ನ ಖರೀದಿಸುವಲ್ಲಿ ಜನರು ತೊಡಗಿದ್ದರು. ಈ ಬಾರಿಯ ಅಕ್ಷಯ ತೃತೀಯ ದಿನದಂದು ಚಿನ್ನ ಗ್ರಾಂಗೆ 2560 ಹಾಗೂ ಬೆಳ್ಳಿ ಗ್ರಾಂಗೆ 46 ಇತ್ತು. ಆದ್ದರಿಂದಾಗಿ ಜನರು ದುಬಾರಿ ಬೆಲೆಯೆಂದು ಭಾವಿಸದೇ ಬಹು ಖುಷಿಯಿಂದ ಕುಟುಂಬ ಸಮೇತರಾಗಿ ಬಂದು ತಮ್ಮ ನೆಚ್ಚಿನ ಒಡೆವೆಗಳ ಖರೀಸುವಲ್ಲಿ ಜಮಾಯಿಸಿದ್ದರು.
ಇತ್ತೀಚೆಗೆ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಹಕರು ಮುಂಗಡವಾಗಿ ತಮಗೆ ಬೇಕಾದ ಆಭರಣಗಳನ್ನು ಖರೀದಿಸಿದ್ದು, ಅದನ್ನು ಪಡೆಯುವಲ್ಲಿಯೂ ಹೆಚ್ಚಿನ ಜನರು ಸೋಮವಾರ ಮುಂದಾಗಿದ್ದರು. ಈ ಬಾರಿ ಭಾನುವಾರ ಸಂಜೆಯಿಂದಲೇ ಅಕ್ಷಯ ತೃತೀಯ ಆರಂಭವಾಗಿದೆ ಎನ್ನಲಾದ ಕಾರಣ ಎರಡು ದಿನ ವ್ಯಾಪಾರದ ಭರಾಟೆಯಿತ್ತು. ಶ್ರೀಮಂತರು ಬಹುಬೆಲೆಯ ಆಭರಣ ಖರೀದಿಸಿದರೆ ಆರ್ಥಿಕವಾಗಿ ಹಿಂದುಳಿದವರು ಒಂದು ಮೂಗುತಿಯನ್ನಾದರೂ ಸಾಂಕೇತಿಕವಾಗಿ ಕೊಂಡುಕೊಂಡು ಈ ಸಂಭ್ರಮದಲ್ಲಿ ಭಾಗವಹಿಸಿದ್ದು ಕಂಡುಬಂತು.
ಚಿನ್ನ ಎಂದರೆ ಮಹಿಳೆಯರಿಗೆ ಬಲುಮೋಹ. ಅಂತೆಯೇ ಮಳಿಗೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಮಲಬಾರ್ ಗೋಲ್ಡ್ ಮಳಿಗೆಗೆ ಸೋಮವಾರ ಭೇಟಿ ನೀಡಿದ್ದ ರಾಜೀವ್‌ನಗರದ ದೀಪಾ, ಪ್ರತಿವರ್ಷ ಅಕ್ಷಯ ತೃತೀಯದಂದು ಖರೀದಿಸುವ ಪದ್ಧತಿಯಿದ್ದು, ಇದರಿಂದಾಗಿ ತಮಗೆ ಹೆಚ್ಚಿನ ಆಭರಣ ಲಭ್ಯವಾಗುತ್ತಿದೆ ಎಂದು ನಂಬಿಕೆಯ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಇಂದ್ರನಿಗೆ ದೇವಲೋಕದ ಆದಿಪತ್ಯ ದೊರಕಿದ್ದು, ದ್ವಾಪರ ಯುಗದಲ್ಲಿ ಕೃಷ್ಣನು ಕುಚೇಲನಿಗೆ ಸಂಪತ್ತು ದಯಪಾಲಿಸಿದ್ದು ಹಾಗೂ ಪರಶುರಾಮನ ಜನ್ಮದಿನವೆಂದು ಹೇಳಲಾಗುವ ಈ ದಿನದಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿಸಿದರೆ ಅದು ವೃದ್ಧಿಯಾಗುತ್ತದೆ ಎಂಬ ಪ್ರತೀತಿಯಿದೆ. ಅಲ್ಲದೆ, ಉತ್ತಮ ಕಾರ್ಯ ಹಮ್ಮಿಕೊಂಡರೆ ಶುಭವಾಗಲಿದೆ ಎಂಬ ನಂಬಿಕೆ ಇರುವುದರಿಂದ ಗೃಹಪ್ರವೇಶ, ಮದುವೆ ಮತ್ತಿತರ ಸಮಾರಂಭ ನಡೆಯಿತು.
ಇಂತಹ ನಂಬಿಕೆಯಿಂದಾಗಿ ಪ್ರತಿವರ್ಷವು ಆಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತೆಯೇ ಆಭರಣ ಮಾರಾಟಗಾರರ ವ್ಯಾಪಾರದ ವಹಿವಾಟು ಸಹ ಅಧಿಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com