'ಅನುವಾದ ಸೃಜನಶೀಲ ಕಲೆ'

Updated on: 

ಕ.ಪ್ರ.ವಾರ್ತೆ ,  ಮೈಸೂರು ,  ಮೇ 14
ಅನುವಾದ ಸೃಜನಶೀಲ ಕಲೆ ಎಂದು ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಆರ್. ರಮೇಶ್ ಹೇಳಿದರು.
ವೆಂಕಟಗಿರಿ ಪ್ರಕಾಶನ, ಆಚಾರ್ಯ ಪುರೋಷತ್ತಮ ವಿದ್ಯಾಪೀಠ, ಹಿರಣ್ಮಯಿ ಪ್ರತಿಷ್ಠಾನ, ವೈಷ್ಣವಿ ಸಂಗೀತ ಸಭಾ ಸಂಯುಕ್ತಾಶ್ರಯದಲ್ಲಿ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎನ್.ಆರ್. ಚಂದ್ರವದನರಾವ್ ಅವರ ಸಾಹಿತ್ಯ ಚಿತ್ತಾರ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬೇರೆ ಭಾಷೆಯ ಸಾಹಿತ್ಯವನ್ನು ಅನುವಾದ ಹಾಗೂ ರೂಪಾಂತರಿಸುವ ಮೂಲಕ ಕನ್ನಡದಲ್ಲಿ ಸಾಕಷ್ಟು ಕೃತಿಗಳು ಹೊರಬಂದಿವೆ. ಮತ್ತೊಂದು ಭಾಷೆಯ ಪ್ರಾದೇಶಿಕ ಸಂಸ್ಕೃತಿಯನ್ನು ತಿಳಿಸುವಲ್ಲಿ ಅನುವಾದ ಸಂಪರ್ಕ ಸೇತುವೆಯಾಗಿದೆ. ಹಾಗಾಗಿ ಭಾಷಾಂತರ ಒಂದು ಸೃಜನಶೀಲ ಕಲೆ ಎಂದರು.
ನಮ್ಮ ಬಯಕೆ ಹಾಗೂ ಅಸೆಗಾಗಿ ಭಾಷೆ ಬಳಸಿಕೊಳ್ಳುವುದು ಒಂದು ಮುಖವಾದರೆ, ದುರಾಸೆ ಮತ್ತು ಕ್ರೋಧ ಮುಚ್ಚಿಡಲು ಸಹ ಭಾಷೆ ಬಳಸಿಕೊಳ್ಳವುದು ಮತ್ತೊಂದು ಮುಖವಾಗಿದೆ ಎಂದು ತಿಳಿಸಿದರು.
ಕನ್ನಡದಲ್ಲಿ ಶೇಕ್ಸ್‌ಪಿಯರ್ ಸೇರಿದಂತೆ ಅನೇಕ ಹೆಸರಾಂತ ಬರಹಗಾರರ ನಾಟಕಗಳನ್ನು ಇಲ್ಲಿನ ಸಂಸ್ಕೃತಿಗೆ ಅನ್ವಯಿಸುವಂತೆ ರೂಪಾಂತರಗೊಳಿಸಿರುವುದುಂಟು. ಸಾಹಿತ್ಯ ಚಿತ್ತಾರ ಕೃತಿಯಲ್ಲಿ ಲೇಖಕರು, ಕೆಲವು ಅನುವಾದ, ಕೆಲವು ರೂಪಾಂತರ ಹಾಗೂ ಕೆಲವು ಸ್ವಂತ ರಚನೆಯ ಕಥೆ, ಕವನ ನೀಡಿದ್ದಾರೆ ಎಂದರು.
ಪ್ರಾಸ್ತಾವಿಕ ಮಾತುಗಳಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ನೀ. ಗಿರಿಗೌಡ, ಸಾಹಿತ್ಯ ರಚಿಸುವಲ್ಲಿ ತೊಡಗಿದ್ದ ನಾನು ಇತ್ತೀಚೆಗೆ ವೆಂಕಟಗಿರಿ ಪ್ರಕಾಶನ ಸಂಸ್ಥೆ ಆರಂಭಿಸಿದ್ದು, ಯಾವುದೇ ಲಾಭ ಅಥವಾ ನಷ್ಟವಿಲ್ಲದೆ ಪುಸ್ತಕ ಪ್ರಕಟಿಸುವ ಕೆಲಸ ಮಾಡುತ್ತಿದೇನೆ. ಈಗಾಗಲೇ ಎನ್.ಆರ್. ಚಂದ್ರವದನರಾವ್ ಅವರ 4 ಕೃತಿಗಳನ್ನು ಪ್ರಕಟಿಸಿರುವುದಾಗಿ ತಿಳಿಸಿದರು.
ಸಾಹಿತ್ಯ ಚಿತ್ತಾರ ಕೃತಿ ಕುರಿತು ಲೇಖಕಿ ವಿಮಲಶ್ರೀ ಮಾತನಾಡಿದರು. ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಪೋಷಕ ಕೆ. ರಘುರಾಂ ಅತಿಥಿಯಾಗಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಸಂಸ್ಥಾಪಕ ಎ. ಸಂಗಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com