ಕ.ಪ್ರ.ವಾರ್ತೆ , ಕೆ.ಆರ್. ನಗರ , ಮೇ 14
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಸಿಹಿ ವಿತರಿಸಿ ಸಂಭ್ರಮ ಆಚರಿಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮಾಡಿದರಲ್ಲದೆ, ಕಾಂಗ್ರೆಸ್ ಪರ ಮತ್ತು ಸಿದ್ದರಾಮಯ್ಯ ಪರ ಜೈಕಾರ ಕೂಗಿದರು.
ಇದೇ ವೇಳೆ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಿ.ಎಂ. ಹೇಮಂತ್ ಮಾತನಾಡಿ, ಕಾಂಗ್ರೆಸ್ ಹಿರಿಯ ಧುರೀಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ರಾಜ್ಯದ ಹಿಂದುಳಿದ ವರ್ಗಕ್ಕೆ ಸಿಕ್ಕಿದ ಸಾಮಾಜಿಕ ನ್ಯಾಯವಾಗಿದೆ. ಇವರು ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯುವಂತೆ ಆಶಿಸಿದರು.
ಗ್ರಾಮದ ಮುಖಂಡರಾದ ಜಿ.ಡಿ. ಕೃಷ್ಣೇಗೌಡ, ಶಿವಸ್ವಾಮಿ, ಜಿ.ಎನ್. ರಘು, ಡೇರಿ ಮಹದೇವು, ಸಣ್ಣಸ್ವಾಮಿ, ಲೋಕೇಶ್ ಆರಾಧ್ಯ, ಜಿ.ಡಿ. ಅರುಣಕುಮಾರ್, ಕೆಂಪರಾಜು, ಅಟೋ ತ್ಯಾಗರಾಜ್, ಮಂಜುನಾಥ, ಭಾಸ್ಕರ, ಸೋಮು, ಮರೀಗೌಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ನಿಂದ ದಲಿತರಿಗೆ ಅನ್ಯಾಯ: ಆರೋಪ
ಕೆ.ಆರ್. ನಗರ: ದಶಕಗಳಿಂದ ದಲಿತರ ಮತ ಪಡೆಯುತ್ತಿರುವ ಕಾಂಗ್ರೆಸ್, ವಿಧಾನಸಭಾ ಚುನಾವಣೆಯಲ್ಲಿ ಸಮಾಜದ ಮತ ಪಡೆದು ಅಧಿಕಾರಕ್ಕೆ ಬಂದು ದಲಿತರಿಗೆ ಅಧಿಕಾರ ನೀಡದೆ ವಂಚಿಸಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಉಪ ಪ್ರಧಾನ ಸಂಚಾಲಕ ಎಚ್.ಬಿ. ದಿವಾಕರ ಎಚ್ಚರಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇದರ ಪ್ರತಿಫಲ ಅನುಭವಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.