ಕ.ಪ್ರ.ವಾರ್ತೆ , ಹುಣಸೂರು , ಮೇ 14
ಕ್ರಿಶ್ಚಿಯನ್ ಮತಾಂತರ ಮಾಡುವವರಿಂದ ಹಿಂದೂ ಧರ್ಮದ ಬಗ್ಗೆ ಅವಹೇಳನೆ ಹಾಗೂ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಮೇರೆಗೆ ಒಂದನೇ ಪಕ್ಷಿರಾಜಪುರದ ಮತಾಂತರಗೊಂಡ 11 ಮಂದಿ ಹಾಗೂ ಒಬ್ಬ ಕ್ರಿಶ್ಚಿಯನ್ ಫಾಸ್ಟರ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಿರಾಜಪುರದ ಗ್ರಾಮಸ್ಥರು ದೂರು ನೀಡಿರುವ ಪ್ರಕಾರ ಹಿಂದೂ ಧರ್ಮವನ್ನು ಅವಹೇಳನಕಾರಿಯಾಗಿ ಮಾತನಾಡಿ, ಹಿಂದೂ ದೇವತೆಗಳ ಫೋಟೋಗಳಿಗೆ ಅಪಮಾನ ಮಾಡಿ, ಬೀದಿಗಳಲ್ಲಿ ಬೀಸಾಡಿದ್ದು, ಜನಾಂಗದವನ್ನು ಎತ್ತಿ ಕಟ್ಟಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅಲ್ಲದೆ, ಹಿಂದೂ ದೇವರುಗಳನ್ನು ನಂಬಿರುವುದರಿಂದ ನೀವು ಕಷ್ಟದಲ್ಲಿದ್ದೀರ, ಕ್ರೈಸ್ತ ಧರ್ಮಕ್ಕೆ ಬನ್ನಿ ಹಣ ಸಹಾಯ ನೀಡುತ್ತೇವೆಂದು ನಂಬಿಸಿ, ಬಲಾತ್ಕಾರವಾಗಿ ಕ್ರೈಸ್ತ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದಾರೆ.
ಹಿಂದೂ ದೇವರ ಫೋಟೋಗಳನ್ನು ಮನೆಯಿಂದ ಹೊರಕ್ಕೆ ಬೀಸಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಕೋಮುಗಲಭೆಯಾಗುವ ಸಾಧ್ಯತೆ ಇದ್ದು, ಇಂತಹ ಕೃತ್ಯ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣಾ ಎಸ್ಐ ಅರುಣ್ ಸ್ಥಳ ಪರೀಕ್ಷೆ ನಡೆಸಿದ್ದು, ರಸ್ತೆ ಬದಿಯಲ್ಲಿ ಬಿದ್ದಿದ್ದ ದೇವರ ಫೋಟೋಗಳನ್ನು ವಶಪಡಿಸಿಕೊಂಡು, ಪಟ್ಟಣ ಹೊರವಲಯದಲ್ಲಿರುವ ಐ.ಕೆ. ಕಲ್ಯಾಣಮಂಟಪ ಬಳಿಯಿರುವ ಫಾಸ್ಟರ್ ಸುರೇಶ್, ಅದೇ ಜನಾಂಗದ ಕಾಂಗರಾಜ್, ಚಂದರ್, ಕಾರ್ತಿಕ್ ಕುಮಾರ್, ಮುರಳಿ, ಮೊದಲ್ರಾಜು, ಚಂದರ್, ಸುದೇಶ್, ಚಂದರಾಜ್, ಮಹರಾಜು, ವಿನೋದ್, ಶೇಖರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಎಸ್ಐ ತಿಳಿಸಿದ್ದಾರೆ.