ಕ.ಪ್ರ.ವಾರ್ತೆ , ಬೈಲುಕುಪ್ಪೆ , ಮೇ 14
ಗ್ರಾಹಕರೊಬ್ಬರು ಸಾಲ ಪಡೆಯಲು ನೀಡಿದ್ದ ಚೆಕ್ಅನ್ನು ದುರ್ಬಳಕೆ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೈನಾನ್ಸ್ ಸಂಸ್ಥೆ ಮುಂದೆ ದಸಂಸ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ತಾಲೂಕು ಸಂಚಾಲಕ ಕುಮಾರ್ ಕರಡೀಪುರ ಮಾತನಾಡಿ, ಕೊಪ್ಪ ಗ್ರಾಮದಲ್ಲಿನ ಸ್ವಸ್ತಿಕ್ ಫೈನಾನ್ಸ್ನವರು ಕೊಪ್ಪ ನಿವಾಸಿ ದಲಿತ ಜವರಯ್ಯ ಅವರ ಪುತ್ರ ಕೆ.ಜೆ. ದೇವರಾಜು ಎಂಬವರು ಸಾಲ ಪಡೆಯುವಾಗ ನೀಡಿದ್ದ ಖಾಲಿ ಚೆಕ್ಅನ್ನು ದುರುಪಯೋಗಪಡಿಸಿಕೊಂಡು ಫೈನಾನ್ಸ್ ಪಾಲುದಾರ ಬಿ.ಎಸ್. ಸುರೇಶ್ ಹಾಗೂ ಪಿಗ್ಮಿ ಕಲೆಕ್ಟರ್, ಗ್ರಾಪಂ ಸದಸ್ಯ ಎಂ.ಬಿ. ಶಿವಸ್ವಾಮಿ ಮತ್ತು ಅವರ ಪಾಲುದಾರರು ಸೇರಿ ದುರುದ್ದೇಶದಿಂದ 1 ಲಕ್ಷಗಳಿಗೆ ಚೆಕ್ ಬೌನ್ಸ್ ಮಾಡಿಸಿ ವಕೀಲರ ಮೂಲಕ ನೋಟಿಸ್ ನೀಡಿ ದಲಿತರಿಗೆ ತೊಂದರೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಆರೋಪ ಮಾಡಿರುವ ಇವರನ್ನು ಕೂಡಲೇ ವಂಚನೆಯ ಆರೋಪದಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಹುಣಸೂರು ಡಿವೈಎಸ್ಪಿ ಮುದ್ದುಮಹದೇವಯ್ಯ, ವೃತ್ತ ನಿರೀಕ್ಷಕ ಪಿ.ವಿ. ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿ ಕೂಡಲೆ ಫೈನಾನ್ಸ್ ಅವರ ಜೊತೆಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.
ಎಚ್.ಎಂ. ಚನ್ನಯ್ಯ, ಕೆ.ಆರ್. ಮಾಯಪ್ಪ, ಸಿ.ಜಿ. ರವಿ, ಗೋಪಾಲ್, ಮಹಮದ್ ಶರೀಫ್, ಅಣ್ಣಯ್ಯ, ಪುಟ್ಟಸ್ವಾಮಿ, ಶಿವರಾಜು, ಪ್ರದೀಪ್, ಚಂದ್ರು, ನಾರಾಯಣ, ಸಣ್ಣಪ್ಪ ಇದ್ದರು.