ಕ.ಪ್ರ.ವಾರ್ತೆ , ಸಾಲಿಗ್ರಾಮ , ಮೇ 20
ಖಾಸಗಿ ಕಂಪನಿಗಳಿಂದ ಖರೀದಿಸಿದ ರಾಗಿ ಬಿತ್ತನೆ ಬೀಜದಿಂದ ಉತ್ತಮ ಇಳುವರಿ ಪಡೆಯದ ರೈತರು ಮೋಸಕ್ಕೆ ಬಲಿಯಾಗಿದ್ದಾರೆ.
ಗ್ರಾಮದ ಗ್ರಾಪಂ ಸದಸ್ಯ ಎಸ್.ಬಿ. ದೇವೇಗೌಡರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕಳೆದ ಮೂರುವರೆ ತಿಂಗಳ ಹಿಂದೆ ಮೈಸೂರಿನ ಬಿತ್ತನೆ ಬೀಜ ಮಾರಾಟದ ಅಂಗಡಿಯಲ್ಲಿ ಒಂದು ಕಂಪನಿಯ ರಾಗಿ ಬೀಜವನ್ನು ಖರೀದಿಸಿ ತಂದು ಸಾವಿರಾರು ರು. ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಉತ್ತಮ ರಾಗಿ ಬೆಳೆ ಬೆಳೆಯಲು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿ ಬಂದ ರಾಗಿ ಪೈರಿಗೆ ಕೊಳವೆ ಬಾವಿ ಮುಖಾಂತರ ನೀರು ಒದಗಿಸಿ ಉತ್ತಮ ಗೊಬ್ಬರವನ್ನು ಸಹ ನೀಡಿದ್ದರು.
ದಿನಗಳೆದಂತೆ ಉತ್ತಮವಾಗಿ ಬಂದ ಬೆಳೆ ಕಟಾವು ಮಾಡುವ ಸಮಯದಲ್ಲಿ ರಾಗಿ ಜೊಳ್ಳು ಹಿಡಿದಿತ್ತು. ಇದನ್ನು ಗಮನಿಸಿದ ರೈತ ದೇವೇಗೌಡ ಗಾಬರಿಗೊಂಡು ಕಂಪನಿಯವರು ಉತ್ತಮ ಗುಣಮಟ್ಟದ ರಾಗಿ ಬಿತ್ತನೆ ಬೀಜ ನೀಡದೆ ಮೋಸ ಮಾಡಿದರೆಂದು ಕಂಗಾಲಾಗಿದ್ದಾರೆ. ಈ ಬೆಳೆ ಬೆಳೆಯಲು ಸಾಲ ಮಾಡಿದರೂ ನಷ್ಟ ಉಂಟಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಸಾವಿರಾರು ರು. ನಷ್ಟವುಂಟಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಕಳಪೆ ಬೀಜ ಕಾರಣ: ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಮಧುಚಂದ್ರ ರಾಗಿ ಬೆಳೆಯನ್ನು ಪರಿಶೀಲಿಸಿ ಬಿತ್ತನೆ ಬೀಜ ಮಾರಾಟಗಾರರೊಂದಿಗೆ ವ್ಯವಹರಿಸಿ ಅವರ ಸಲಹೆ ಸೂಚನೆಯಂತೆ ಕಷ್ಟಪಟ್ಟು ಬೆಳೆ ತೆಗೆಯಲು ರೈತರು ಮುಂದಾದರೂ ಸಹ ಕಳಪೆ ಬೀಜ ಮಾರಾಟದಿಂದ ರಾಗಿ ಬೆಳೆಯಲ್ಲಿ ನಷ್ಟ ಅನುಭವಿಸುವ ಪರಿಸ್ಥಿತಿ ಬಂದೊದಗಿದೆ. ರಾಗಿ ಬೆಳೆಗೆ ಹಿಂದೆಂದೂ ಕಾಣದ ರೋಗ ಕಂಡು ಬಂದಿದ್ದು ಇಂತಹ ಪರಿಸ್ಥಿತಿಗೆ ಕಳಪೆ ಬೀಜ ವಿತರಣೆಯೇ ಕಾರಣವೆಂದು ಅಂತಹ ಕಂಪನಿಗಳ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಬೇಕು ಹಾಗೂ ರೈತರಿಗೆ ನಷ್ಟ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್. ದಿನೇಶ, ರೈತರಾದ ಎಸ್.ಜೆ. ಕೃಷ್ಣೇಗೌಡ, ಶ್ರೀನಿವಾಸ, ರಘು, ಕೃಷ್ಣಪ್ಪ ಇದ್ದರು.