ಕ.ಪ್ರ.ವಾರ್ತೆ , ಮೈಸೂರು , ಮೇ 20
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ನಂತರ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಮಹತ್ವದ ಕಾರ್ಯಯೋಜನೆಗಳ ಬಗೆಗಿನ ಮನವಿ ಸಲ್ಲಿಸಲಾಯಿತು. ಮೈಸೂರಿನಲ್ಲಿ ನಡೆದಿದ್ದ ವಲಯ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 13 ಸಾವಿರ ಕೋಟಿ ಬಂಡವಾಳ ಹೂಡಲು 534 ಉದ್ಯಮಿದಾರರು, ಸ್ಥಳೀಯರು ಹಾಗೂ ವಿದ್ಯಾವಂತರು ಮುಂದೆ ಬಂದಿದ್ದರು. ಆ ಸಮಾರಂಭದಲ್ಲಿ ತಾವು ದಿಕ್ಸೂಚಿ ಭಾಷಣ ಮಾಡಿ ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಿರಿ. ಈಗ ಆ ಅವಕಾಶ ಲಭಿಸಿದ್ದು ಕೊಟ್ಟ ಭರವಸೆ ಈಡೇರಿಸುವಂತೆ ನಿಯೋಗ ಕೇಳಿಕೊಂಡಿತು.
ಮೈಸೂರು- ಬೆಂಗಳೂರು ರೇಲ್ವೆ ಡಬಲ್ ಲೈನ್ ರಸ್ತೆ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರೇಲ್ವೆ ವ್ಯವಸ್ಥೆ ಮಾಡುವುದು. ಮೈಸೂರು ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ವಿಮಾನ ಹಾರಾಟವನ್ನು ವ್ಯವಸ್ಥೆಗೊಳಿಸಬೇಕು. ಈಗ ವಾರಕ್ಕೆ ಮೂರು ಬಾರಿ ಹಾರಾಡುತ್ತಿದ್ದು, ಇದನ್ನು ಶಾಶ್ವತಗೊಳಿಸಬೇಕು. ನಗರದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಗಮನ ಹರಿಸುವಂತೆ ಕೋರಲಾಯಿತು.
ವಿದ್ಯುತ್ ನೀಡಲು ಆಗ್ರಹ: ಜಿಲ್ಲೆಯಲ್ಲಿ ಸುಮಾರು 26 ಸಾವಿರ ಕಾರ್ಖಾನೆಗಳಿದ್ದು, ನಗರದಲ್ಲಿ 30 ಸಾವಿರ ವ್ಯಾಪಾರಿ ಪರವಾನಗಿ ಹೊಂದಿದ್ದಾರೆ. ಜಿಲ್ಲೆಗೆ ವಿದ್ಯುತ್ ಅಭಾವವಿದ್ದು, ಸಣ್ಣ ಕೈಗಾರಿಕೆಗಳು ತಮ್ತ ವ್ಯಾಪಾರ ವಹಿವಾಟುಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೈಗಾರಿಕೆ ಮತ್ತು ವಾಣಿಜ್ಯ ಬೆಳವಣಿಗೆಗೆ ಕುಂಠಿತಗೊಳ್ಳುತ್ತಿದೆ. ಹಾಗೆ ಮೈಸೂರು- ನಂಜನಗೂಡು ಮಧ್ಯೆ ನಾಲ್ಕು ಪಥದ ರಸ್ತೆಯನ್ನು ಆದಷ್ಟು ಬೇಗ ನಿರ್ಮಿಸುವುದು. ನೈಸ್ ಕಾರಿಡಾರ್ ವಿವಾದದಿಂದ ಎಂಟು ವರ್ಷಗಳಿಂದ ಸ್ಥಗಿತಗೊಂಡಿದೆ. ಎಂಟು ಪಥದ ರಸ್ತೆಯಾದಲ್ಲಿ ಈಗಿರುವ 3 ಗಂಟೆ ಸಮಯಕ್ಕಿಂತ ಕೇವಲ 1.30 ಗಂಟೆ ಸಮಯದಲ್ಲಿ ಮೈಸೂರು ತಲುಪಬಹುದು ಎಂದು ಮನವರಿಕೆ ಮಾಡಿಕೊಡಲಾಯಿತು.
ನಗರದ ಬಸ್ ನಿಲ್ದಾಣದ ಮುಂಭಾಗದ ಪಾಲಿಕೆ ಜಾಗ, ಮೃಗಾಲಯ ಮುಂದಿರುವ ಜಾಗ, ನಂಜರಾಜ ಬಹದ್ಧೂರ್ ಛತ್ರದ ಹಿಂದಿರುವ ಜಾಗ, ನಲ್ಲಪ್ಪ ಠಾಣೆ ಪ್ರದೇಶವಿರುವ ಜಾಗ, ಮಯೂರ ಕಾಂಪ್ಲೆಕ್ಸ್, ಅಶೋಕ ವೃತ್ತದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು. ಕೈಗಾರಿಕಾ ಪ್ರಾಧಿಕಾರ ಸ್ಥಾಪಿಸಿ ನಗರದ ಹೆಬ್ಬಾಳು, ಮೇಟಗಳ್ಳಿ ಹಾಗೂ ಹೂಟಗಳ್ಳಿ ಪ್ರದೇಶವನ್ನು ಪ್ರಾಧಿಕಾರವೆಂದು ಘೋಷಿಸಬೇಕು. ಜತೆಗೆ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕು. ದಸರಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸುವಂತೆ ಕೋರಲಾಯಿತು. ನಿಯೋಗದಲ್ಲಿ ಎಂಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ದೇವರಾಜ ಮಾರುಕಟ್ಟೆ ಅಧ್ಯಕ್ಷ ಎಸ್. ಮಹದೇವ್, ಹೆಬ್ಬಾಳು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಎಚ್. ಜಯಂತ್, ಎಪಿಎಂಸಿ ಸದಸ್ಯ ಎಸ್. ಪ್ರಕಾಶ್, ಮೈಸೂರು ಕೈಗಾರಿಕಾ ಸಂಘದ ಮಾಜಿ ಸದಸ್ಯ ಶ್ರೀಶೈಲ ರಾಮಣ್ಣ, ಬಾಲಸುಬ್ರಹ್ಮಣ್ಯಂ, ರವೀಂದ್ರ, ಬನ್ಸಾಲಿ ಇದ್ದರು.