ಸಹಕಾರ ಕ್ಷೇತ್ರ ಉಳ್ಳವರ ಪಾಲು: ಮುಖ್ಯಮಂತ್ರಿ

Updated on: 

ಕ.ಪ್ರ.ವಾರ್ತೆ ,  ಹುಣಸೂರು ,  ಮೇ 20
ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತರುವ ಮೂಲಕ ಎಲ್ಲ ವರ್ಗಗಳಿಗೂ ಅಧಿಕಾರ ವಿಕೇಂದ್ರೀಕರಣ ಮಾಡಿ ನ್ಯಾಯ ದೊರಕಿಸಲು ಕಾಂಗ್ರೆಸ್ ಸರ್ಕಾರ ಕಂಕಣಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಬಿ.ಎಂ. ಮುಖ್ಯರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಪ್ರತಿಮೆಗೆ ಸೋಮವಾರ ಪುಷ್ಪಾರ್ಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರು, ಹಿಂದುಳಿದ ವರ್ಗಗಳ ಮತ್ತು ಶೋಷಿತರ ಧ್ವನಿಯಾಗಿದ್ದ ಅರಸು ಅವರಿಗೆ ನಮನ ಸಲ್ಲಿಸಿದ್ದೇನೆ. ಅವರು ಜಾರಿಗೆ ತಂದ ಕಾರ್ಯಕ್ರಮಗಳಿಂದ ಬಡವರು, ಶೋಷಿತರು, ದಲಿತರು ನೆಮ್ಮದಿಯಾಗಿ ಜೀವನ ಮಾಡಲು ಅಧಿಕಾರ ಮತ್ತು ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಸಹಕಾರ ಕ್ಷೇತ್ರ ಅಧಿಕಾರ ಉಳ್ಳವರ ಪಾಲಾಗಿದೆ. ಈ ಬಗ್ಗೆ ತಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೀಸಲಾತಿ ತರುವ ಬಗ್ಗೆ ಚಿಂತಿಸಲಾಗಿದೆ. ತಜ್ಞರ ಜತೆ ಸಮಾಲೋಚಿಸಿ ಸಹಕಾರ ಕಾಯಿದೆಗೆ ತಿದ್ದುಪಡಿ ಸೇರಿದಂತೆ ಮೀಸಲಾತಿ ತರಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆ ಕಂದಕ ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಈ ಬಗ್ಗೆ ತಮ್ಮ ಸಚಿವ ಸಂಪುಟದಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಅನುದಾನ ಮಂಜೂರಾತಿ ಮಾಡಿಸುವ ಮೂಲಕ ಶೀಘ್ರವೇ ಶಾಶ್ವತ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸರ್ಕಾರದಲ್ಲಿದೆ ಎಂದರು.
ನಾಲೆ ಆಧುನೀಕರಣ: ತಾಲೂಕಿನ ನಾಲೆಗಳನ್ನು ಆಧುನೀಕರಿಸಲು ಮತ್ತು ಪಟ್ಟಣದ ಲಕ್ಷ್ಮಣತೀರ್ಥ ನದಿಯ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲಿ ಸ್ಥಾನಮಾನ ನೀಡುವೆ ಎಂದು ಭರವಸೆ ನೀಡಿದ್ದೆ. ಮಂತ್ರಿ ಸ್ಥಾನ ನೀಡಲು ಕಷ್ಟವಾಗುತ್ತದೆ. ಯಾವುದಾದರೂ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕ ಎಚ್.ಪಿ. ಮಂಜುನಾಥ್, ಮಾಜಿ ಶಾಸಕ ಎಚ್.ಸಿ. ಬಸವರಾಜು, ಎಐಸಿಸಿ ಸದಸ್ಯ ಎಚ್.ಎನ್. ಪ್ರೇಮ್‌ಕುಮಾರ್, ಜಿಪಂ ಸದಸ್ಯರಾದ ಮಂಜುಳಾ ರಾಜು, ಡಾ. ಪುಷ್ಪಾವತಿ ಅಮರನಾಥ್. ರಮೇಶ್, ಮಾಜಿ ಸದಸ್ಯ ಡಿ.ಕೆ. ಕುನ್ನೇಗೌಡ, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಮುಖಂಡರಾದ ಧರ್ಮಾಪುರ ರಮೇಶ್, ಕಲ್ಕುಣಿಕೆ ಶ್ರೀನಿವಾಸ್, ಅಜ್ಗಾರ್ ಪಾಷಾ, ಸುನೀತಾ ಜೈರಾಮೇಗೌಡ, ನವೀನ್ ರೈ, ಜಾಕೀರ್ ಹುಸೇನ್, ಶಿವರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಚಂದ್ರಶೇಖರ್, ತಂಬಾಕು ಮಂಡಳಿ ಸದಸ್ಯ ಬಿ.ಎನ್. ಜಯರಾಮು, ಎಸಿ ವಿನೂತ ಪ್ರಿಯಾ, ತಹಸೀಲ್ದಾರ್ ಶಿವಾನಂದಮೂರ್ತಿ, ಮುಖ್ಯಾಧಿಕಾರಿ ಹರೀಶ್, ಲೋಕೋಪಯೋಗಿ ಇಲಾಖೆ ಎಇಇ ವಾಸು, ಎಸ್ಪಿ ಆರ್. ದಿಲೀಪ್, ಹೆಚ್ಚುವರಿ ಎಸ್ಪಿ ಮೋಹನ್ ರೆಡ್ಡಿ, ಡಿವೈಎಸ್ಪಿ ಮುದ್ದು ಮಹದೇವಯ್ಯ, ವೃತ್ತ ನಿರೀಕ್ಷಕ ಚಂದ್ರಶೇಖರ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಕ್ಷದ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com