ಅವಿಭಜಿತ ಜಿಲ್ಲೆಗೆ ಘನತೆಯ ಖಾತೆ

Updated on: 

ಕ.ಪ್ರ.ವಾರ್ತೆ ,  ಮೈಸೂರು ,  ಮೇ 20
ಅವಿಭಜಿತ ಮೈಸೂರು ಜಿಲ್ಲೆಗೆ ಈ ಬಾರಿ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಸಿಂಹಪಾಲು ದೊರೆತಿರುವುದಲ್ಲದೇ ಮತ್ತೆ ಹಣಕಾಸು, ಕಂದಾಯ, ಸಹಕಾರ ಖಾತೆಗಳು ಸಿಕ್ಕಿವೆ. ಲೋಕೋಪಯೋಗಿ ಖಾತೆಯೂ ಬಂಪರ್ ಆಗಿ ಬಂದಿದೆ.
1989 ರಲ್ಲಿ ವೀರೇಂದ್ರ ಪಾಟೀಲರ ಸಂಪುಟದಲ್ಲಿ ಹಣಕಾಸು, ಅಬ್ಕಾರಿ ಖಾತೆಗಳೊಂದಿಗೆ ನಂ.2 ಸ್ಥಾನದಲ್ಲಿದ್ದ ಎಂ.ರಾಜಶೇಖರಮೂರ್ತಿ ಅವರು ಬೊಕ್ಕಸವನ್ನು ತುಂಬಿಸಿದ ಕೀರ್ತಿಗೆ ಭಾಜನರು. ಅದಕ್ಕೂ ಮೊದಲು 1983 ರಿಂದ 1989 ರವರೆಗೆ ರಾಜ್ಯದಲ್ಲಿ ಜನತಾಪಕ್ಷದ ಆಳ್ವಿಕೆ ಇತ್ತು. ಬೊಕ್ಕಸ ಕೂಡ ಖಾಲಿಯಾಗಿತ್ತು.
ಅನಾರೋಗ್ಯದಿಂದ ವೀರೇಂದ್ರ ಪಾಟೀಲರು ಒಂದು ವರ್ಷದೊಳಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. ನಂತರ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾದರು. ಆದರೆ ರಾಜಶೇಖರಮೂರ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಇರಲಿಲ್ಲ. ಬಂಗಾರಪ್ಪ ಅವರು ಕೂಡ ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕಾದ ಪರಿಸ್ಥಿತಿ ಉಂಟಾಗಿ ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾದರು. ಆಗ ಕಂದಾಯ ಸಚಿವರಾಗಿದ್ದು ಇದೇ ರಾಜಶೇಖರಮೂರ್ತಿ.
ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ರಾಜಶೇಖರಮೂರ್ತಿ ರಾಜ್ಯಸಭಾ ಸದಸ್ಯರಾಗಿ ಕೇಂದ್ರದಲ್ಲಿ ಪಿ.ಪಿ. ನರಸಿಂಹರಾವ್ ಸರ್ಕಾರದಲ್ಲಿ ಭೂಸಾರಿಗೆ ಸಚಿವರಾಗಬೇಕಾಯಿತು.
1994 ರಲ್ಲಿ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದಾಗ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ, ಜೆ.ಎಚ್. ಪಟೇಲ್ ಉಪ ಮುಖ್ಯಮಂತ್ರಿ. ಆ ಕಾಲಕ್ಕೆ ಗೌಡರ ನೆಚ್ಚಿನ ಭಂಟನಾಗಿದ್ದ ಸಿದ್ದರಾಮಯ್ಯ ಅವರಿಗೆ ಹಣಕಾಸು ಖಾತೆ ಸಿಕ್ಕಿತು. ಸಿದ್ದರಾಮಯ್ಯ ಅವರು 1994 ರಿಂದ 1999 ರವರೆಗೆ ಸತತ ಐದು ಬಜೆಟ್‌ಗಳನ್ನು ಮಂಡಿಸಿದರು. 1996 ರಲ್ಲಿ ಮೊದಲ ಬಾರಿ ಉಪ ಮುಖ್ಯಮಂತ್ರಿಯಾದರು.
1999 ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಎಚ್. ವಿಶ್ವನಾಥ್ ಆರಂಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಂತ್ರಿ. ನಂತರ ಅವರಿಗೆ ಸಿಕ್ಕಿದ್ದು ಸಹಕಾರ ಖಾತೆ.
7 ಬಾರಿ ಬಜೆಟ್ ಮಂಡನೆ: 2004 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ 2ನೇ ಬಾರಿಗೆ ಉಪ ಮುಖ್ಯಮಂತ್ರಿ. ಜತೆಗೆ ಹಣಕಾಸು ಹಾಗೂ ಅಬ್ಕಾರಿ ಖಾತೆ. ಈ ಅವಧಿಯಲ್ಲಿ 2 ಬಜೆಟ್ ಮಂಡಿಸಿದರು. ಒಟ್ಟಾರೆ 7 ಬಜೆಟ್ ಮಂಡಿಸಿದ ಕೀರ್ತಿ ಇದೆ. ನಂತರ ಬಂದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಜಿ.ಟಿ, ದೇವೇಗೌಡ ಸಹಕಾರ ಮಂತ್ರಿಯಾಗಿದ್ದರು.
2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಜಿಲ್ಲೆಯವರಿಗೆ ಮಂತ್ರಿಗಿರಿ ಸಿಕ್ಕಿದ್ದೆ ಎರಡು ವರ್ಷಗಳ ಸುಮಾರಿಗೆ. ಅದು ಎಸ್.ಎ. ರಾಮದಾಸ್ ಅವರಿಗೆ ಸಿಕ್ಕಿದ್ದು ವೈದ್ಯಕೀಯ ಶಿಕ್ಷಣ ಖಾತೆ. ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಕೆಲಕಾಲ ಮಂತ್ರಿಯಾಗಿ, ಸಣ್ಣ ಕೈಗಾರಿಕೆ ಮತ್ತು ಅರಣ್ಯ ಖಾತೆ ನಿರ್ವಹಿಸಿದ್ದರು.
2013 ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಮತ್ತೆ ಹಣಕಾಸು ಖಾತೆ ತಮ್ಮ ಬಳಿಯೇ ಇರಿಸಿಕೊಂಡಿದ್ದು, ಜುಲೈ ಮೊದಲ ವಾರದಲ್ಲಿ 8ನೇ ಬಜೆಟ್ ಮಂಡನೆಗೆ ಸಜ್ಜಾಗುತ್ತಿದ್ದಾರೆ.
ವಿ. ಶ್ರೀನಿವಾಸಪ್ರಸಾದ್ ಅವರು ರಾಜಶೇಖರಮೂರ್ತಿ ಅವರ ನಂತರ ಜಿಲ್ಲೆಯಿಂದ ಕಂದಾಯ ಸಚಿವರಾಗಿದ್ದಾರೆ. ಮಹದೇವಪ್ರಸಾದ್ ಅವರು ವಿಶ್ವನಾಥ್ ಹಾಗೂ ಜಿ.ಟಿ. ದೇವೇಗೌಡರ ನಂತರ ಸಹಕಾರ ಸಚಿವರಾಗಿದ್ದಾರೆ.
ಇತರೆ ಸಮಾನ ಖಾತೆಗಳು
ಬಿ. ರಾಚಯ್ಯ ಹಾಗೂ ಎಚ್. ವಿಶ್ವನಾಥ್ ಅವರು ಅರಣ್ಯ ಖಾತೆ ನಿರ್ವಹಿಸಿದ್ದರು. ಎಚ್. ವಿಶ್ವನಾಥ್, ರಾಣಿ ಸತೀಶ್ ಎಂ.ಶಿವಣ್ಣ ಹಾಗೂ ಎಚ್.ಎಸ್. ಮಹದೇವಪ್ರಸಾದ್ ಅವರು ಕನ್ನಡ ಮತ್ತು ಸಂಸ್ಕೃತಿ ಖಾತೆ, ಟಿ.ಎನ್. ನರಸಿಂಹಮೂರ್ತಿ, ಎಸ್. ನಂಜಪ್ಪ ಹಾಗೂ ಎಚ್.ಎಸ್. ಮಹದೇವಪ್ರಸಾದ್ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ, ಕೆ.ಪುಟ್ಟಸ್ವಾಮಿ, ಡಾ.ಎಚ್.ಎಲ್.ತಿಮ್ಮೇಗೌಡ, ಕೆ.ಎಸ್. ನಾಗರತ್ನಮ್ಮ, ಡಾ.ಎಚ್.ಸಿ. ಮಹದೇವಪ್ಪ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಬ್ದುಲ್ ನಜೀರ್‌ಸಾಬ್ ಹಾಗೂ ಡಾ.ಎಚ್.ಸಿ. ಮಹದೇವಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್,  ಜಿ.ರಾಜೂಗೌಡರು ಕೃಷಿ ಸಂಸ್ಕರಣೆ, ಎಚ್. ನಾಗಪ್ಪ ಕೃಷಿ ಮಾರುಕಟ್ಟೆ, ಅಜೀಜ್‌ಸೇಠ್ ಹಾಗೂ ಸಿದ್ದರಾಮಯ್ಯ ಅವರು ಸಾರಿಗೆ, ಅಜೀಜ್‌ಸೇಠ್ ಹಾಗೂ ತನ್ವೀರ್ ಸೇಠ್ ಕಾರ್ಮಿಕ ಮತ್ತು ವಕ್ಫ್, ಕೆ.ಬಿ. ಶಿವಯ್ಯ, ಸಿದ್ದರಾಮಯ್ಯ, ಎಂ. ಮಹದೇವ್, ಚಂದ್ರಪ್ರಭಾ ಅರಸ್ ಅವರು ರೇಷ್ಮೆ, ಎಚ್.ಎಂ. ಚನ್ನಬಸಪ್ಪ, ಎಂ. ಶಿವಣ್ಣ ಅವರು ನೀರಾವರಿ ಖಾತೆ ನಿರ್ವಹಿಸಿದ್ದರು.

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com