ಕ.ಪ್ರ.ವಾರ್ತೆ , ಚಾಮರಾಜನಗರ , ಮೇ 20
ಮಾನವ ಜನ್ಮ ಶ್ರೇಷ್ಠ. ಜೀವನದಲ್ಲಿ ಸರಳತೆಗೆ ಒತ್ತು ಕೊಟ್ಟಾಗ ಸಮಾಜ ಸುಧಾರಣೆಯತ್ತಾ ಸಾಗುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಹರವೆಯಲ್ಲಿ ಮೈಸೂರು ಮತ್ತು ಚಾ.ನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿ ಹಾಗೂ ಹರವೆ ವಿರಕ್ತ ಮಠದ ಸಹಯೋಗದಲ್ಲಿ ನಡೆದ ವೀರಶೈವ ವಧು-ವರರ ಸಾಮೂಹಿಕ ವಿವಾಹದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಆಡಂಬರ ಹಾಗೂ ವೈಭವೀಕರಣದ ವಿವಾಹಗಳನ್ನು ಹಣವಿರುವವರು ಮಾಡುತ್ತಾರೆ ಎಂದು ಇಲ್ಲದವರು ಸಾಲಸೋಲ ಮಾಡಿ ಮದುವೆ ಮಾಡಿದ ಮೇಲೆ ಪಶ್ಚಾತಾಪ ಪಡುತ್ತಾರೆ. ಇದನ್ನು ಕಂಡ ಸ್ವಾಮೀಜಿಗಳು ಜನರಲ್ಲಿ ಅರಿವು ಮೂಡಿಸಿ, ಸರಳ ವಿವಾಹಕ್ಕೆ ಉತ್ತೇಜನ ನೀಡಿದ್ದಾರೆ. ಸನ್ಯಾಸತ್ವದಷ್ಟೇ ಗೃಹಸ್ಥಾಶ್ರಮವೂ ಪವಿತ್ರವಾದದು ಎಂದರು.
ಆಶೀರ್ವಚನ ನೀಡಿದ ಕಾರಾಪುರ ಮಠದ ಬಸವರಾಜ ಸ್ವಾಮೀಜಿ, ಶರಣರು ಹೇಳಿದಂತೆ ಸತಿಪತಿಗಳೊಂದಾದ ಬದುಕು ಶ್ರೇಷ್ಠ ಬದುಕು. ಸಮಾಜಮುಖಿ ಕಾರ್ಯಗಳಲ್ಲಿ ಸ್ವಾಮೀಜಿ ತೊಡಗಿಸಿಕೊಂಡು ಜನರಲ್ಲಿ ಅರಿವು ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿಯ ಕಾರ್ಯದರ್ಶಿ ಮುಡಿಗುಂಡ ಶ್ರೀಕಂಠಸ್ವಾಮೀಜಿ ಮಾತನಾಡಿ, ಗೋಷ್ಠಿ ವತಿಯಿಂದ ಸರಳ ಸಾಮೂಹಿಕ ವಿವಾಹಕ್ಕೆ ಒತ್ತು ನೀಡಲಾಗುತ್ತಿದೆ. ಜೊತೆಗೆ ಲಿಂಗಧಾರಣೆ ಮಾಡಿ ಅವರ ಬದುಕನ್ನು ಶ್ರೇಷ್ಠಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿ ಹಾಗೂ ಹರವೆ ವಿರಕ್ತ ಮಠದ ಸಹಯೋಗದಲ್ಲಿ ನಡೆದ ವೀರಶೈವ ವಧು-ವರರ ಸಾಮೂಹಿಕ ವಿವಾಹದಲ್ಲಿ ಏಳು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಉಚಿತವಾಗಿ ಮಾಂಗಲ್ಯ, ಕಾಲುಂಗರ, ವಸ್ತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲಪ್ಪಸ್ವಾಮೀಜಿ, ಗೋಪಾಲಪುರದ ಗಂಗಾಧರ ಸ್ವಾಮೀಜಿ, ಮೂಡುಗೂರು ಮಠದ ಉದ್ದಾನ ಸ್ವಾಮೀಜಿ ಆಶೀರ್ವಚನ ನೀಡಿದರು. ಲೋಕೇಶ್ ಪ್ರಾರ್ಥಿಸಿ, ಶೋಭಾ ಸ್ವಾಗತಿಸಿದರು.