ಕ.ಪ್ರ.ವಾರ್ತೆ , ಮೈಸೂರು , ಮೇ 24
ಗ್ರಾಮದಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡು ನಾಲ್ಕು ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಘಟನೆಯಿಂದ ಭಯಭೀತರಾಗಿರುವ ಡಿ. ಸಾಲುಂಡಿ ಗ್ರಾಮದ ಜನತೆ ಸಿದ್ದಪ್ಪಾಜಿ ದೇವರ ಹಬ್ಬ ಮಾಡುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು ಶುಕ್ರವಾರ ಕಂಡುಬಂದಿತು.
ಕಳೆದ ಒಂದು ವಾರದಿಂದ ನಾಲ್ಕು ಮಕ್ಕಳು ಡೆಂಘೀಗೆ ತುತ್ತಾಗಿ ಸಾವಿಗೀಡಾಗಿದ್ದಾರೆ. ಇದಕ್ಕೆ ದೇವರ ಮೊರೆ ಹೋಗುವುದು ಅನಿವಾರ್ಯ ಎಂದು ತಿಳಿದು ಗ್ರಾಮಸ್ಥರು ಶುಕ್ರವಾರ ಬೆಳಗ್ಗೆಯೇ ಗ್ರಾಮದ ಅರಳೀಕಟ್ಟೆ ಬಳಿ ಇರುವ ಸಿದ್ದಪ್ಪಾಜಿ ದೇವಸ್ಥಾನದ ಮುಖಂಡರನ್ನು ಸೇರಿಸಿ ಗುಡ್ಡಪ್ಪನ ಮೂಲಕ ದೇವರನ್ನು ಕರೆಸಿ ಸಂದೇಶ ಕೇಳಿದ್ದಾರೆ. ಅದಕ್ಕೆ ಸಿದ್ದಪ್ಪಾಜಿಯ ಗುಡ್ಡಪ್ಪ ಹಬ್ಬ ಮಾಡುವಂತೆ ತಿಳಿಸಿದ್ದಾರೆ.
ಒಂಬತ್ತು ವಾರಗಳ ಕಾಲ ಮಡಿ ಮೈಲಿಗೆಯಿಂದ ಸಿಹಿ- ಸಪ್ಪೆ ಭೋಜನ ತಯಾರಿಸಿ ಕಟ್ಟುನಿಟ್ಟಾಗಿ ಹಬ್ಬ ಮಾಡಬೇಕು ಎಂದು ಗುಡ್ಡಪ್ಪ ತಿಳಿಸಿದ್ದಾರೆ. ಆದ್ದರಿಂದ ನಮ್ಮ ಗ್ರಾಮದ ಯಜಮಾನರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಗ್ರಾಮದ ವಯೋವೃದ್ಧೆ ಪುಟ್ಟತಾಯಮ್ಮ ಕನ್ನಡಪ್ರಭಕ್ಕೆ ತಿಳಿಸಿದರು.