ಕ.ಪ್ರ.ವಾರ್ತೆ , ಮೈಸೂರು , ಮೇ 24
ಒಂದೆಡೆ ಜನರು ವಿದ್ಯುತ್ ಕಡಿತದಿಂದ ಸಂಕಷ್ಟ ಎದುರಿಸುತ್ತಿದ್ದರೆ, ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಜನಪ್ರತಿನಿಧಿಗಳ ಕಟೌಟ್ ಹಾಗೂ ವೃತ್ತವನ್ನು ವಿದ್ಯುತ್ ದೀಪದಿಂದ ಅಲಂಕರಿಸಲಾಗಿದ್ದು, ಇದು ರಾತ್ರಿಪೂರ್ತಿ ಉರಿಯುತ್ತಿರುವುದನ್ನು ಇಲ್ಲಿನ ಸೋನಾರ್ ಬೀದಿಯ ನಿವಾಸಿ ಬಿ.ಎಸ್. ಸತೀಶ್ ಖಂಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಸಿದ್ದರಾಮಯ್ಯ ಹಾಗೂ ಇತರ ಮುಖಂಡರ ಕಟೌಟ್ ರಾರಾಜಿಸುತ್ತಿವೆ. ಇದಕ್ಕೆ ವಿದ್ಯುತ್ ದೀಪಾಲಂಕಾರ ಸಹ ಮಾಡಲಾಗಿದೆ. ಇಡೀ ದಿನ ರಾತ್ರಿ ಈ ರೀತಿ ದೀಪ ಉರಿಸುವುದು ವಿದ್ಯುತ್ ಅಪವ್ಯಯ ಮಾಡಿದಂತೆ. ಈ ದೀಪಗಳಿಗೆ ವಿದ್ಯುತ್ ಪೂರೈಕೆ ಹೇಗಾಗುತ್ತಿದೆ ಎಂಬುದರ ಬಗ್ಗೆ ನಗರ ಪಾಲಿಕೆ ಅಥವಾ ಸೆಸ್ಕ್ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಇಂತಹ ವ್ಯರ್ಥ ವೈಭವೀಕರಣ ಸರಿಯಲ್ಲ ಎಂದು ತಿಳಿಸಿದ್ದಾರೆ.