ಮೇಯರ್ ವಾರ್ಡ್ನಲ್ಲೂ ಸ್ವಚ್ಛತೆ ಮರೆ

Updated on: 

ಮಾ. ವೆಂಕಟೇಶ್
ಕ.ಪ್ರ. ವಾರ್ತೆ, ಮೈಸೂರು, ಆ.1
ಯಾವುದೋ ಒಂದು ರಾಜಕೀಯ ಪಕ್ಷವು ಆಡಳಿತದಲ್ಲಿದ್ದಾಗ ನಮಗೆ ಸರಿಯಾದ ಸವಲತ್ತು ಕಲ್ಪಿಸುತ್ತಿಲ್ಲವೆಂದು ವಿಪಕ್ಷ ಸದಸ್ಯರು ದೂರುವುದು ಸಹಜ. ಆದರೆ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷದವರೇ ಅದರಲ್ಲೂ ಬಹುಮುಖ್ಯವಾಗಿ ಪಾಲಿಕೆಯ ಆಡಳಿತ ನಡೆಸುತ್ತಿರುವ ಮೇಯರ್ ವಾರ್ಡ್ಗೆ ಸೌಲಭ್ಯ ಕಲ್ಪಿಸದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ.
ಪಡುವಾರಹಳ್ಳಿಯ ವಾರ್ಡ್ ವ್ಯಾಪ್ತಿಯಲ್ಲಿ ಅಲ್ಲಿನ ಸ್ಥಳೀಯ ನಗರ ಪಾಲಿಕೆ ಸದಸ್ಯರು ನೀಡುವ ಮಾಹಿತಿ ಪ್ರಕಾರ ಸುಮಾರು 4 ಸಾವಿರ ಮನೆಗಳಿವೆ.
ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ ಹಸಿ ಕಸ ಹಾಗೂ ಒಣಕಸವನ್ನು ಪ್ರತ್ಯೇಕಿಸಿ ನೀಡುವ ಸಲುವಾಗಿ ಪಾಲಿಕೆಯಿಂದ ಎಲ್ಲ ವಾರ್ಡ್ಗಳಿಗೂ ಕೆಂಪು ಹಾಗೂ ಹಸಿರು ಪ್ಲಾಸ್ಟಿಕ್ ಬುಟ್ಟಿಗಳನ್ನು ನೀಡುವ ಕಾರ್ಯ ಹಮ್ಮಿಕೊಂಡಿದೆ. ಅದರಂತೆ ನಗರದ ಹಲವು ವಾರ್ಡ್ಗಳಲ್ಲಿ ಈ ಕಾರ್ಯಕ್ಕೆ ಚಾಲನೆ ದೊರಕಿದೆ.
33ನೇ ವಾರ್ಡ್ನ್ನು ಪ್ರತಿನಿಧಿಸುತ್ತಿರುವ ನಗರ ಪಾಲಿಕೆ ಸದಸ್ಯೆ ಹಾಗೂ ಹಾಲಿ ಮೇಯರ್ ಆದ ಎನ್.ಎಂ. ರಾಜೇಶ್ವರಿ ಸೋಮು ಅವರು ಪಡುವಾರಹಳ್ಳಿ ನಿವಾಸಿ. ಇಲ್ಲಿ ಪರಿಶಿಷ್ಟರ ಕಾಲೋನಿಯಲ್ಲಿ ಸುಮಾರು 600- 700 ಮನೆಗಳಿವೆ. ಹೀಗಿರುವಾಗ ಪಾಲಿಕೆಯು ಕೇವಲ 2300 ಬುಟ್ಟಿಗಳನ್ನು ನೀಡಿದರೆ ಯಾರಿಗೆ ಹಂಚುವುದು ಎಂಬ ಕಾರಣಕ್ಕೆ ಅದನ್ನು ವಿತರಿಸುವ ಗೋಜಿಗೆ ಹೋಗಿಲ್ಲ.
ಈ ಭಾಗದ ವ್ಯಾಪ್ತಿಯು ಉತ್ತರಕ್ಕೆ ಮಾತೃಮಂಡಳಿ ವೃತ್ತದಿಂದ ಆದಿಪಂಪ ರಸ್ತೆ ಕೂಡುವ ಬಿಂದುವಿನಿಂದ ವಾಲ್ಮೀಕಿ ರಸ್ತೆ ಕೂಡುವ ಬಿಂದುವರೆಗೆ. ಪೂರ್ವಕ್ಕೆ ಆದಿಪಂಪ ರಸ್ತೆ ಹಾಗೂ ವಾಲ್ಮೀಕಿ ರಸ್ತೆ ಕೂಡುವ ಬಿಂದುವಿನಿಂದ ವಾಲ್ಮೀಕಿ ರಸ್ತೆ ಮಾರ್ಗವಾಗಿ ಹುಣಸೂರು ರಸ್ತೆ ಮತ್ತು ವಾಲ್ಮೀಕಿ ರಸ್ತೆ ಕೂಡುವ ಬಿಂದುವರೆಗೆ. ದಕ್ಷಿಣಕ್ಕೆ ವಾಲ್ಮೀಕಿ ರಸ್ತೆ ಹಾಗೂ ಹುಣಸೂರು ರಸ್ತೆ ಕೂಡುವ ಬಿಂದುವಿನಿಂದ ಹುಣಸೂರು ರಸ್ತೆ ಮಾರ್ಗವಾಗಿ ಚಲಿಸಿ ನೀಲಗಿರೀಸ್ ವೃತ್ತ ಹಾಗೂ ಪಡುವಾರಹಳ್ಳಿ 6ನೇ ಮುಖ್ಯರಸ್ತೆ ಕೂಡುವ ಬಿಂದುವರೆಗೆ.
ಪಶ್ಚಿಮಕ್ಕೆ ನೀಲಗಿರೀಸ್ ವೃತ್ತದಿಂದ 6ನೇ ಮುಖ್ಯರಸ್ತೆ ಮಾರ್ಗವಾಗಿ ಚಲಿಸಿ ದೇವಸ್ಥಾನ ರಸ್ತೆಯನ್ನು ತಲುಪಿ, ಅಲ್ಲಿಂದ ಮಾತೃಮಂಡಳಿ ರಸ್ತೆ ವೃತ್ತ ಸೇರುವ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 12 ಸಾವಿರ  ಜನಸಂಖ್ಯೆ ಹಾಗೂ 200ಕ್ಕೂ ಅಧಿಕ ಉದ್ದಿಮೆಗಳಿವೆ.
ಇಲ್ಲಿಯೂ ಕಂಟೈನರ್ ಕೊರತೆ ಹಾಗೂ ಪೌರಕಾರ್ಮಿಕರ ಸಿಬ್ಬಂದಿ ಕೊರತೆ ಇರುವುದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಒದಗಿಸುವಂತೆ ಅಧಿಕಾರಿಗಳಿಗೆ ಮೊರೆ ಇಡುವುದು ಸದಸ್ಯರಿಗೂ ತಪ್ಪದು, ಮೇಯರ್ಗೂ ತಪ್ಪದು.




ನಾಲ್ಕು ಸಾವಿರ ಮನೆಗಳಿಗೆ 2300 ಬುಟ್ಟಿಗಳನ್ನು ಒದಗಿಸಿದರೆ ಯಾರಿಗೆ ವಿತರಿಸೋದು. ಇದಕ್ಕಾಗಿ ಕೆಲವು ಕಡೆ ಜಗಳವೂ ನಡೆದಿದೆ. ಇಡೀ ವಾರ್ಡ್ನ ಸ್ವಚ್ಛತೆಗೆ 25 ಮಂದಿ ಪೌರಕಾರ್ಮಿಕರಿದ್ದಾರೆ. 45 ಮಂದಿ ಒದಗಿಸುವಂತೆ ಕೋರಲಾಗಿದೆ. ಹಸಿ ಕಸ ಒಣಕಸವನ್ನು ಪ್ರತ್ಯೇಕಿಸಿ ನೀಡುವಂತೆ ಜನರಿಗೆ ಅರಿವು ಮೂಡಿಸಲಾಗುವುದು. ಇಲ್ಲಿನ ವಾರ್ಡ್ನ ಕಸದ ಸಂಸ್ಕರಣೆಗೆ ಗೋಕುಲಂ ಸ್ಮಶಾನದಲ್ಲಿ ನಿರ್ಮಿಸಿರುವ ಶೂನ್ಯಕಸ ಸಂಸ್ಕರಣಾ ಘಟಕ ಬೇಕಾಗಿಲ್ಲ. ಇಲ್ಲಿನ ತ್ಯಾಜ್ಯವನ್ನು ಎಕ್ಸೆಲ್ ಪ್ಲಾಂಟ್ಗೆ ಸಾಗಿಸಲಾಗುವುದು. ಇಂತಹ ಘಟಕಗಳ ಸ್ಥಾಪನೆಗೆ ಭೂಮಿ ಕೋರಲಾಗಿದೆ. ಅಲ್ಲಿ ಘಟಕ ಸ್ಥಾಪಿಸುವುದು ಒಳ್ಳೆಯದು.  
  ಎನ್.ಎಂ. ರಾಜೇಶ್ವರಿ ಸೋಮು,
ವಾರ್ಡ್  33, ನಗರ ಪಾಲಿಕೆ ಸದಸ್ಯರು ಮತ್ತು ಮೇಯರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com