ಬನ್ನೂರು: ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಯುವ ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಹೇಳಿದರು.
ಶುಕ್ರವಾರ ಬನ್ನೂರಿನ ಪುರಸಭಾ ಆವರಣದಲ್ಲಿ ನಡೆದ ಮುಖ್ಯಮಂತ್ರಿ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 110 ಕೋಟಿ ವೆಚ್ಚದ ಮೈಸೂರು- ಮಳವಳ್ಳಿ ಹೆದ್ದಾರಿಯ ಬನ್ನೂರಿನ ಚಾಮನಹಳ್ಳಿಯಿಂದ ಕಾವೇರಿ ನದಿಯ ಸೇತುವೆ ತನಕ 4 ಪಥದ ನೂರಡಿ ರಸ್ತೆಯ ಕಾಮಗಾರಿ, 34 ಕೋಟಿ ವೆಚ್ಚದ ಬನ್ನೂರು ಪುರಸಭೆ ನಿರಂತರ ಶುದ್ಧ ಕುಡಿಯುವ ನೀರಿನ ಸರಬರಾಜು ಕಾಮಗಾರಿಗೆ, 23 ಕೋಟಿ ವೆಚ್ಚದ ಹೋಬಳಿಯ ಕೇತುಪುರ ಗ್ರಾಮದಲ್ಲಿ ಸುಮಾರು 44 ಹಳ್ಳಿಗಳಿಗೆ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡುವರು. ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಭಾಗವಹಿಸುವರು ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಡಿ.ಪದ್ಮನಾಭ್ ಮಾತನಾಡಿ, ಬನ್ನೂರಿನ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ದೊರೆತಿರುವುದು ಬನ್ನೂರಿಗೆ ಸುವರ್ಣ ಅವಕಾಶ ಸಿಕ್ಕಂತಾಗಿದೆ. ಮುಖ್ಯಮಂತ್ರಿಗಳನ್ನು ಪ್ರೀತಿ ವಾತ್ಸಲ್ಯದಿಂದ ಬರಮಾಡಿಕೊಂಡು ಬನ್ನೂರನ್ನು ತಾಲೂಕು ಮಾಡುವಂತೆ ಬೇಡಿಕೆ ಸಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಶಾಸಕ ಎಸ್. ಕೃಷ್ಣಪ್ಪ, ಪುರಸಭೆ ಅಧ್ಯಕ್ಷ ಅಜೀಜುಲ್ಲಾ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎನ್. ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಸ್. ರವೀಂದ್ರಕುಮಾರ್, ಮಂಜುನಾಥ್, ಸ್ವಾಮಿ, ಸತೀಶ್ನಾಯಕ್, ಎ.ಎನ್. ಸ್ವಾಮಿ, ಮುನವರ್ ಪಾಷ, ಹೊನ್ನನಾಯಕ, ಕೆಪಿಸಿಸಿ ಸದಸ್ಯ ಎಂ. ಸುಧೀರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ. ವಜ್ರೇಗೌಡ ಇದ್ದರು.