ಸುತ್ತೂರು: ಎನ್ಸಿಸಿಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದಲ್ಲದೆ ರಾಷ್ಟ್ರಾಭಿಮಾನ, ಭಾವೈಕ್ಯತೆ ವೃದ್ಧಿಗೊಳ್ಳುವುದು ಎಂದು ಮೈಸೂರಿನ 4ನೇ ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್ಸಿಸಿ ಘಟಕದ ಸಾರ್ಜೆಂಟ್ ಎಸ್.ಕುಮಾರ್ ಹೇಳಿದರು.
ಜೆಎಸ್ಎಸ್ ಪ್ರೌಢಶಾಲೆಯ ಎನ್ಸಿಸಿ ವಾಯುದಳದ ಈ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿ, ಏರೋ ಮಾಡೆಲಿಂಗ್ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ಭವಿಷ್ಯದ ಜೀವನವನ್ನು ಉತ್ತಮಪಡಿಸಿಕೊಳ್ಳಲು ವಾಯುದಳದಲ್ಲಿ ವಿಪುಲ ಅವಕಾಶಗಳಿವೆ. ಸೇನೆ ಎಂದರೆ ಕೇವಲ ಯುದ್ಧದಲ್ಲಿ ಹೋರಾಡುವುದು ಎಂಬ ಭಾವನೆ ತಪ್ಪು ಕಲ್ಪನೆಯಾಗಿದೆ. ಸೇನೆ ಎಂದರೆ ಧೈರ್ಯ, ಸಾಹಸ, ರಕ್ಷಣೆ, ಶಿಸ್ತಿನ ಸಂಕೇತ ಎಂದು ಬಣ್ಣಿಸಿದರು.
ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ತು ಮಾತನಾಡಿ, ಎನ್ಸಿಸಿ ಕೆಡೆಟ್ಗಳು ಸ್ವಯಂ ಶಿಸ್ತು ರೂಢಿಸಿಕೊಳ್ಳಬೇಕೆಂದರು. ಮುಖ್ಯೋಪಾಧ್ಯಾಯ ಜಿ.ಶಿವಮಲ್ಲು ಮಾತನಾಡಿದರು. ಮೈಸೂರಿನ 4ನೇ ಕರ್ನಾಟಕ ಏರ್ಸ್ಕ್ವಾಡ್ರನ್ ಎನ್ಸಿಸಿ ಘಟಕದ ಕಾರ್ಪುರಲ್ ಕೆ.ಕೆ. ಸಿಂಗ್, ಶಾಲಾ ಎನ್ಸಿಸಿ ಪ್ರಥಮಾಧಿಕಾರಿ ಮ.ಗು. ಬಸವಣ್ಣ ಇದ್ದರು.
ಶೈಕ್ಷಣಿಕ ಅಧ್ಯಯನ ಪ್ರವಾಸ
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ಪ್ಲಾಟ್ಫಾರಂ ಸಂಖ್ಯೆ 64 ಮತ್ತು 3 ರಿಂದ ಆಯ್ದ 40 ರೈತರಿಗೆ ತಂಬಾಕಿನ ಕುರಿತಾದ ಶೈಕ್ಷಣಿಕ ಅಧ್ಯಯನ ಪ್ರವಾಸ ನಡೆಯಿತು.
ತಂಡವು ಪ್ರಥಮವಾಗಿ ಮಾದರಿ ಗ್ರಾಮಗಳೆಂದು ಗುರುತಿಸಿಕೊಂಡಿರುವ ತಾಲೂಕಿನ ನಾಗನಹಳ್ಳಿ ಮತ್ತು ಹಿರಿಕ್ಯಾತನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ನಂತರ ತಾಂಡವಪುರದ ಬಳಿಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ, ಐಎಲ್ಟಿಡಿ ಕಂಪನಿಯ ಹೊಗೆಸೊಪ್ಪು ಸಂಸ್ಕರಣಾ ಕೇಂದ್ರಕ್ಕೆ ಭೇಟಿ ನೀಡಿದರು. ಹೊಗೆಸೊಪ್ಪಿನಲ್ಲಿ ಅನ್ಯಪದಾರ್ಥಗಳ ಬೇರ್ಪಡಿಕೆ, ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಸಾಗಿಸುವ ಪ್ಯಾಕೇಜ್ ಕುರಿತು ಮಾಹಿತಿ ನೀಡಲಾಯಿತು.
ಕಂಪನಿಯ ಅಧಿಕಾರಿ ಕೊಟ್ರೇಶ್ ಮಾತನಾಡಿ, ಹುಣಸೂರಿನ ಹೊಗೆಸೊಪ್ಪಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶಿಷ್ಟ ಬೇಡಿಕೆ ಇದ್ದು, ಇತ್ತೀಚಿನ ದಿನಗಳಲ್ಲಿ ಅನ್ಯಪದಾರ್ಥಗಳ ಮಿಶ್ರಣದಿಂದಾಗಿ ತನ್ನ ಬೇಡಿಕೆ ಕಳೆದುಕೊಳ್ಳುತ್ತಿದೆ. ರೈತರು ತಾವು ಬೆಳೆಯುವ ಹೊಗೆಸೊಪ್ಪಿನಲ್ಲಿ ಅನ್ಯಪದಾರ್ಥಗಳ ಮಿಶ್ರಣವಾಗದಂತೆ ನೋಡಿಕೊಂಡಲ್ಲಿ ಮಾತ್ರ ಹೆಚ್ಚಿನ ಬೆಲೆ ಪಡೆಯಲು ಸಾಧ್ಯ ಎಂದು ಹೇಳಿದರು.
Advertisement