ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಪಂ ಆವರಣದಲ್ಲಿಯೇ ಜನತಾ ದರ್ಶನ ನಡೆಸಿದರು. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಕಾಣಲು ಹಲವು ಮಂದಿ ಸಾರ್ವಜನಿಕರು ಹೊರಗೆ ಕಾದು ಕುಳಿತಿದ್ದರು. ಮಧ್ಯಾಹ್ನ ಭೋಜನ ವಿರಾಮದ ವೇಳೆ ಸಾರ್ವಜನಿಕರನ್ನು ಭೇಟಿಯಾದ ಸಿದ್ದರಾಮಯ್ಯ ಅವರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಎಲ್ಲ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಜಿಪಂ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್, ಮಾಜಿ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವ್, ಜಿಲ್ಲಾಧಿಕಾರಿ ಪಾಲಯ್ಯ ಇದ್ದರು.
ವಿದ್ಯಾರ್ಥಿಗಳು ಇಲ್ಲದಿದ್ದರೂ ಸಿಎಂ ಊರಲ್ಲಿ ವಿಜ್ಞಾನ ವಿಭಾಗ!
ಸಿಎಂ ತವರೂರು ಎಂಬ ಕಾರಣಕ್ಕೆ 4 ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆ ಇದ್ದರೂ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇದೆ. ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಮರಿತಿಬ್ಬೇಗೌಡ ಬಹಿರಂಗಪಡಿಸಿದ ಸತ್ಯ. ಸಿದ್ದರಾಮಯ್ಯ ಅವರ ತವರೂರು ಸಿದ್ದರಾಮನ ಹುಂಡಿಯ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಇರುವಂತೆ ವಿಜ್ಞಾನ ವಿಭಾಗವೂ ಇದೆ. ಆದರೆ 2010-11 ನೇ ಸಾಲಿನಲ್ಲಿ ಈ ವಿಭಾಗಕ್ಕೆ ಐದು ಮಂದಿ, 2011-12ರ ಸಾಲಿನಲ್ಲಿ ಮೂರು ಮಂದಿ ಮತ್ತು 2012-13ನೇ ಸಾಲಿನಲ್ಲಿ ಇಬ್ಬರು, 2013-14 ಮತ್ತು 2014-15ನೇ ಸಾಲಿನಲ್ಲಿ ಯಾರೂ ಸಹ ಪ್ರವೇಶ ಪಡೆದಿಲ್ಲ. ಆದರೂ ವಿಜ್ಞಾನ ವಿಭಾಗ ಇದೆ. ಸಿದ್ದರಾಮನ ಹುಂಡಿಯಲ್ಲಿನ ವಿಜ್ಞಾನ ವಿಭಾಗವನ್ನು ವರುಣ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಸುವಂತೆ ಮರಿತಿಬ್ಬೇಗೌಡರು ಬರೆದಿದ್ದ ಪತ್ರದ ಕಡತವನ್ನು ಸಿದ್ದರಾಮಯ್ಯ ಅವರು ನೋಡಿ, ನಮ್ಮೂರು ಕಾಲೇಜಿನ ವಿಭಾಗವನ್ನೇ ಸ್ಥಳಾಂತರಿಸುವುದೇ ಎಂದು ಹಿಂದಕ್ಕೆ ಕಳುಹಿಸಿದರಂತೆ. ಈ ವಿಷಯವನ್ನು ಮರಿತಿಬ್ಬೇಗೌಡರು ಬಹಿರಂಗ ಪಡಿಸುತ್ತಲೆ, ಸಿದ್ದರಾಮಯ್ಯ ನಿಜ ಎಂದು ಒಪ್ಪಿಕೊಂಡರು. ಏನು ನಮ್ಮೂರಲ್ಲಿ ಅಷ್ಟು ದಡ್ಡರಿದ್ದಾರಾ? ನಾನೇ ವಿಜ್ಞಾನ ಪದವೀಧರ ಎಂದು ಡಿಡಿಪಿಯುನಿಂದ ಮಾಹಿತಿ ಪಡೆದರು. ಡಿಎಚ್ಒ ಡಾ.ಪುಟ್ಟಸ್ವಾಮಿ ಅವರು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಾಗ, ನಿವೃತ್ತಿಯಾಗಲು ಕೆಲವು ತಿಂಗಳು ಮಾತ್ರ ಇದೆ. ಸರಿಯಾಗಿ ಕೆಲಸ ಮಾಡು. ನಿಮ್ಮನ್ನು ಈ ಸ್ಥಳಕ್ಕೆ ಬರಲು ಎಷ್ಟು ಹಿಂಸೆ ಮಾಡಿದ್ದೀಯ ಗೊತ್ತಾ. ಎಂದಾಗ ಪುಟ್ಟಸ್ವಾಮಿ ಅವರು ಹೌದು ಸಾರ್ ಎಂದರು. ಯಾರಿಂದ ನೀನು ಒತ್ತಡತಂದೆ ಹೇಳು ಎಂದಾಗ, ಸಾರ್ ಪುಟ್ಟಣ್ಣಯ್ಯ ಅವರಿಂದ ಸಾರ್ ಎಂದು ಬಹಿರಂಗಪಡಿಸಿದರು.
Advertisement