ಪಿರಿಯಾಪಟ್ಟಣ: ಪ್ರಪಂಚದಲ್ಲಿ ಅಜ್ಞಾನದ ಕಗ್ಗತ್ತಲೆಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕರಿಗೌಡ ಹೇಳಿದರು. ತಾಲೂಕಿನ ಹಿಟ್ಟೆಹೆಬ್ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಬಿಆರ್ಪಿಗಳ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಹೊಂದಿದ್ದರೆ ಸಮಾಜವನ್ನು ಎದುರಿಸಿ ತನ್ನ ಕಾಲಮೇಲೆ ತಾನು ನಿಂತುಕೊಳ್ಳಲು ಸಾಧ್ಯ. ಶಿಕ್ಷಣ ಇಲಾಖೆಯ ಪ್ರತಿಯೊಬ್ಬರೂ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿ ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಇದೇ ವೇಳೆ ವರ್ಗಾವಣೆಗೊಂಡ ಸಿಆರ್ಪಿ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು ಹಾಗೂ ನೂತನ ಸಿಆರ್ಪಿ ಸೋಮಶೇಖರ್ ಅವರನ್ನು ಅಭಿನಂದಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್.ರೇವಣ್ಣ, ಎಚ್.ಕೆ.ಶಿವಮೂರ್ತಿ, ಶಿವು, ಮಲ್ಲೇಶ್, ರಮೇಶ್, ಬಿ.ಟಿ. ಸಣ್ಣಸ್ವಾಮೇಗೌಡ ಇದ್ದರು.
Advertisement