ಮಾ. ವೆಂಕಟೇಶ್
ಮೈಸೂರು: ಕಸದ ಕಂಟೈನರ್ ಅನ್ನು ಸರಿಯಾದ ಸಮಯಕ್ಕೆ ತೆಗೆಯಲ್ಲಿಲ ಎಂದರೆ, ಅದು ಕೊಳೆತು ವಾಸನೆ ಬಂದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವುದರಲ್ಲಿ ಎರಡು ಮಾತಿಲ್ಲ.
ನಗರಪಾಲಿಕೆ ವ್ಯಾಪ್ತಿಯಲ್ಲಿ 65 ವಾರ್ಡ್ಗಳಿದ್ದು, ಈ ಎಲ್ಲ ವಾರ್ಡ್ಗಳಲ್ಲಿ ಸುಮಾರು 200 ಕ್ಕೂ ಅಧಿಕ ಕಂಟೈನರ್ಗಳಿವೆ. ಇಂತಹ ಕಸದ ತೊಟ್ಟಿಗಳನ್ನು ಬಡಾವಣೆಗಳಲ್ಲಿನ ಪ್ರಮುಖ ರಸ್ತೆಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಇರಿಸಿರುವುದನ್ನು ಕಾಣಬಹುದು. ಆಟೋ ಟಿಪ್ಪರ್ನಲ್ಲಿ ಮನೆ ಮನೆಯಿಂದ ಸಂಗ್ರಹಿಸುವ ಕಸವನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸುವ ಮುನ್ನ ಇಲ್ಲಿ ಸುರಿಯಲಾಗುವುದು. ನಂತರ ಇಲ್ಲಿ ಸುರಿದ ಕಸವನ್ನು ಕಂಟೈನರ್ಸಹಿತವಾಗಿ ಕ್ರೇನ್ ಮೂಲಕ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುವ ಕೆಲಸ ಮಾಡಲಾಗುವುದು.
ಇಡೀ ನಗರದ ಕಸದ ತೊಟ್ಟಿಗಳನ್ನು ಸಾಗಾಟ ಮಾಡಲು ಇರುವುದು ಕೇವಲ ಎರಡು ಕ್ರೇನ್ಗಳು ಮಾತ್ರ. ಇದರಿಂದಾಗಿ ಕೆಲವೊಮ್ಮೆ ಕಸದ ತೊಟ್ಟಿಗಳಲ್ಲಿನ ತ್ಯಾಜ್ಯವನ್ನು ಸಮರ್ಪಕವಾಗಿ ಎತ್ತುವಳಿ ಮಾಡದೇ ಅಲ್ಲಿಯೇ ಕೊಳೆಯುವುದು ಉಂಟು. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಸಾರ್ವಜನಿಕರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ಇಂತಹ ಸನ್ನಿವೇಶವೂ ಮಂಡಿ ಮೊಹಲ್ಲಾಕ್ಕೂ ಹೊರತಾಗಿಲ್ಲ. ಅಲ್ಲದೆ ಇಲ್ಲಿನ ದೊಡ್ಡಮೋರಿಯ ವಾಸನೆಯೂ ಸಹ ಜನರ ಅರೋಗ್ಯದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಸರ್ಕಾರದ ಅನುದಾನದಲ್ಲಿ ಮೋರಿಗೆ ಸ್ಲ್ಯಾಬ್ ಹಾಕುವ ಕೆಲಸ ನಡೆದಿದ್ದು, ಮಂಡಿ ಪೊಲೀಸ್ ಠಾಣೆಯಿಂದ ಶ್ರೀ ಟಾಕೀಸ್ವರೆಗೆ ಸ್ವಲ್ಪ ಕಾಮಗಾರಿ ನಡೆದಿದೆ. ದೊಡ್ಡಮೋರಿ ಮುಚ್ಚದ ಕಾರಣ, ಅದರೊಳಗೆ ಕಸ ಎಸೆಯುವುದಿದೆ. ಇದರಿಂದಾಗಿ ಮಳೆ ನೀರು ಕಟ್ಟಿಕೊಂಡು ವಾಸನೆ ಬೀರುವುದರ ಜತೆಗೆ ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ವಾಸಸ್ಥಾನವಾಗಿದ್ದು, ನಿವಾಸಿಗಳ ಆರೋಗ್ಯಕ್ಕೆ ಮಾರಕವಾಗಿದೆ.
ಮಂಡಿ ಮೊಹಲ್ಲಾದಲ್ಲಿ ಸುಮಾರು 14 ಸಾವಿರ ಜನಸಂಖ್ಯೆ, 2400 ಮನೆಗಳು ಹಾಗೂ 400ಕ್ಕೂ ಅಧಿಕ ಉದ್ದಿಮೆಗಳಿವೆ. 38ನೇ ವಾರ್ಡ್ನ ಈ ವ್ಯಾಪ್ತಿಯು ಉತ್ತರಕ್ಕೆ ಸಯ್ಯಾಜಿರಾವ್ ರಸ್ತೆಯಿಂದ ಸಾಡೇ ರಸ್ತೆ ಸೇರುವ ಆರ್ಎಂಸಿ ವೃತ್ತದಿಂದ ಸಾಡೇ ರಸ್ತೆಯಲ್ಲಿ ಚಲಿಸಿ ಬೆಂಕಿನವಾಬ್ ರಸ್ತೆ ಸೇರುವ ಬಿಂದುವರೆಗೆ. ನಂತರ ಬೆಂಕಿ ನವಾಬ್ ರಸ್ತೆ ಮೂಲಕ ಅಕ್ಬರ್ ರಸ್ತೆ ಸೇರುವ ಮಂಡಿ ಮಾರ್ಕೆಟ್ ವೃತ್ತದವರೆಗೆ. ಅಲ್ಲಿಂದ ಅಕ್ಬರ್ ರಸ್ತೆಯಲ್ಲಿ ಚಲಿಸಿ ಕೆ.ಟಿ.ರಸ್ತೆ ನಂತರ ಚಮಲ್ ಮಠ ರಸ್ತೆ ಸೇರುವ ಬಿಂದು.
ಪೂರ್ವಕ್ಕೆ ಅಕ್ಬರ್ ರಸ್ತೆಯಲ್ಲಿ ಚಲಿಸಿ ಚಮಲ್ ಮಠ ಬೀದಿ ಸೇರುವ ಬಿಂದುವಿನಿಂದ ಕಬೀರ್ ರಸ್ತೆ ಸೇರುವ ಬಿಂದು. ನಂತರ ಕಬೀರ್ ರಸ್ತೆಯಲ್ಲಿ ಚಲಿಸಿ ಕೆ.ಟಿ. ಸ್ಟ್ರೀಟ್ ಸೇರುವ ಮಂಡಿ ಪೊಲೀಸ್ ಠಾಣೆ ವೃತ್ತದವರೆಗೆ. ನಂತರ ಕೆ.ಟಿ.ರಸ್ತೆಯಲ್ಲಿ ಸಾಗಿ ಇರ್ವಿನ್ ರಸ್ತೆ ಸೇರುವ ಬಿಂದುವರೆಗೆ. ದಕ್ಷಿಣಕ್ಕೆ ಇರ್ವಿನ್ರಸ್ತೆ, ಕೆ.ಟಿ. ಸ್ಟ್ರೀಟ್ ಸೇರುವ ಬಿಂದುವಿನಿಂದ ಇರ್ವಿನ್ ರಸ್ತೆಯಲ್ಲಿ ಚಲಿಸಿ ಬೆಂಕಿನವಾಬ್ ರಸ್ತೆ, ಕಬೀರ್ ರಸ್ತೆ, ಶ್ರೀಚಿತ್ರಮಂದಿರ ವೃತ್ತದವರೆಗೆ. ಕಬೀರ್ರಸ್ತೆಯ ಮೂಲಕ ಸಯ್ಯಾಜಿರಾವ್ರಸ್ತೆ ಬಿಂದುವರೆಗೆ. ಪಶ್ಚಿಮಕ್ಕೆ ಕಬೀರ್ ರಸ್ತೆ, ಸಯ್ಯಾಜಿರಾವ್ರಸ್ತೆ ಸೇರುವ ಬಿಂದುವಿನಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಚಲಿಸಿ ಸಾಡೇ ರಸ್ತೆ ಸೇರುವ ಆರ್ಎಂಸಿ ವೃತ್ತದವರೆಗೆ ಒಳಗೊಂಡಿದೆ.
ವಾರ್ಡ್ನ ಸ್ವಚ್ಛತೆಗೆ ಆದ್ಯತೆ ವಹಿಸಲಾಗಿದ್ದು, ವಾರ್ಡ್ನಲ್ಲಿ ಕಂಟೈನರ್ ತೆಗೆಯುವಲ್ಲಿ ಸಮಸ್ಯೆಯಿದೆ. ಕಸದ ತೊಟ್ಟಿಗಳು ತ್ಯಾಜ್ಯದಿಂದ ತುಂಬಿ ಭರ್ತಿಯಾಗಿದ್ದರೂ ಸಮರ್ಪಕವಾಗಿ ಎತ್ತುವಳಿ ಮಾಡದ ಕಾರಣ ಕೊಳೆತು ನಾರುವಂತಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬ ಅನಾನುಕೂಲವಾಗಿದೆ. ಕಸದ ವಿಲೇವಾರಿಗೆ ಎರಡು ಮೂರು ದಿನಗಳು ಕಾಯಬೇಕಿದೆ. ಆದ್ದರಿಂದ ಕಂಟೈನರ್ ಸಾಗಿಸುವ ಕ್ರೇನ್ಗಳ ಸಂಖ್ಯೆ ಹೆಚ್ಚಾಗಬೇಕು. ಅಲ್ಲದೆ ಈ ಭಾಗದಲ್ಲಿ ದೊಡ್ಡಮೋರಿಯು ದೊಡ್ಡ ಸಮಸ್ಯೆಯಾಗಿದೆ. ಅದರ ಸ್ವಚ್ಛತೆಗೂ ಕ್ರಮ ವಹಿಸಲಾಗಿದೆ. ಅಲ್ಲದೆ ಈಗಾಗಲೇ ಮುಖ್ಯಮಂತ್ರಿಗಳ ಅನುದಾನದಲ್ಲಿ ಮೋರಿಗೆ ಸ್ಲಾಬ್ ಹಾಕಿಸುವ ಕೆಲಸ ನಡೆದಿದೆ..
ಟಿ ರಮೇಶ್ (ರಮಣಿ)ವಾರ್ಡ್ 38, ನಗರ ಪಾಲಿಕೆ ಸದಸ್ಯರು
Advertisement