ಪಿರಿಯಾಪಟ್ಟಣ: ಎರಡು ಪ್ರತ್ಯೇಕ ಘಟನೆಗಳಲ್ಲಿ ತಂಬಾಕು ಹದಗೊಳಿಸುವ ಬ್ಯಾರನ್ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಸುಟ್ಟು ಹೋಗಿರುವ ಘಟನೆ ಜರುಗಿದೆ.ತಾಲೂಕಿನ ಮಾಲಂಗಿ ಗ್ರಾಮದ ರಾಜನಾಯಕ ಎಂಬವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ನಲ್ಲಿ ತಂಬಾಕು ಹದಗೊಳಿಸುತ್ತಿದ್ದ ವೇಳೆ, ಆಕಸ್ಮಿಕವಾಗಿ ಬೆಂಕಿ ತಗುಲಿ ಬ್ಯಾರನ್ ಸುಟ್ಟು ಹೋಗಿದ್ದು ಅಂದಾಜು 1.70 ಲಕ್ಷದಷ್ಟು ನಷ್ಟ ಸಂಭವಿಸಿದೆ. ಬ್ಯಾರನ್ ವಾಸದ ಮನೆಗೆ ಹೊಂದಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ತಾಲೂಕಿನ ಕೊಡಿಹಳ್ಳಿ ಗ್ರಾಮದ ಜಯಮ್ಮ ಎಂಬವರಿಗೆ ಸೇರಿದ ಬ್ಯಾರನ್ನಲ್ಲಿ ತಂಬಾಕು ಹದಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಸುಮಾರು 1.75 ಲಕ್ಷದಷ್ಟು ನಷ್ಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ನಾಲೆ ಒಡೆದು ಬೆಳೆ ಹಾನಿ
ಪಿರಿಯಾಪಟ್ಟಣ: ನಾಲೆ ಒಡೆದು ಜಮೀನಿಗೆ ನೀರು ನುಗ್ಗಿದ ಪರಿಣಾಮ ಜಮೀನಿನಲ್ಲಿ ಬೆಳೆಯಲಾಗಿದ್ದ ಶುಂಠಿ ಹಾಗೂ ತಂಬಾಕು ಬೆಳೆ ನಷ್ಟವಾಗಿರುವ ಘಟನೆ ತಾಲೂಕಿನ ಹಸುವಿನಕಾವಲು ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸಮೀಪವಿರುವ ಹಾರಂಗಿ ನಾಲೆ ಒಡೆದಿದ್ದು, ನಾಲೆಯ ಸಮೀಪವಿರುವ ಜಯರಾಮಶೆಟ್ಟಿ ಎಂಬವರಿಗೆ ಸೇರಿದ ಒಂದು ಎಕರೆಯಲ್ಲಿ ಬೆಳೆಯಲಾಗಿದ್ದ ತಂಬಾಕು ಹಾಗೂ ಶುಂಠಿ ಬೆಳೆಯು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ನಷ್ಟ ಸಂಭವಿಸಿದೆ.
ಮಳೆಯಿಂದ ಮನೆ ಕುಸಿತ
ಪಿರಿಯಾಪಟ್ಟಣ: ಕೆಳದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಾಸದ ಮನೆಯ ಗೋಡೆ ಕುಸಿದಿರುವ ಘಟನೆ ತಾಲೂಕಿನ ಹುಣಸೆಕುಪ್ಪೆ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸರೋಜಮ್ಮ ಎಂಬವರಿಗೆ ಸೇರಿದ ಮನೆಯ ಗೋಡೆಯು ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ.
ಹಾಳಾಗಿರುವ ರಸ್ತೆ ದುರಸ್ತಿ ಎಂದು
ಕೆ.ಆರ್. ನಗರ: ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆ, ಅಭಿವೃದ್ಧಿಗೆ ಜಿಪಂ ರಾಜ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಇದರಿಂದ ಹಳ್ಳ-ಕೊಳ್ಳ ಬಿದ್ದ ರಸ್ತೆ, ಮಳೆಗಾಲದಲ್ಲಿ ತಿರುಗಾಡಲು ಆಗದ ಪರಿಸ್ಥಿತಿ, ಇದು ಕೆ.ಆರ್. ನಗರ- ರಾಮನಾಥಪುರ ಮುಖ್ಯ ರಸ್ತೆಯಿಂದ ಹಲಗೇಗೌಡನಕೊಪ್ಪಲು ಗ್ರಾಮಕ್ಕೆ ತೆರಳುವ ರಸ್ತೆಯ ದುಸ್ಥಿತಿ. ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಪಡಿಸಲು ದಶಕಗಳಿಂದ ಪಂಚಾಯತ್ ಇಲಾಖೆಯ ಅಧಿಕಾರಿಗಳು ಮುಂದಾಗದ ಹಿನ್ನೆಲೆ ರಸ್ತೆಯಲ್ಲಿ ಪಾದಾಚಾರಿಗಳು ಮತ್ತು ವಾಹನ ಸವಾರರು ತಿರುಗಾಡಲು ತೊಂದರೆಯಾಗಿದೆ. ಅರ್ಧ ಕಿ.ಮೀ. ಇರುವ ರಸ್ತೆಯಲ್ಲಿ ಕಲ್ಲುಗಳು ಕಿತ್ತು ಬಂದು ಮಳೆಗಾಲದಲ್ಲಿ ಹಳ್ಳ ಯಾವುದು ಕೊಳ್ಳ ಯಾವುದು ಅಂತ ತಿಳಿಯದ ಸ್ಥಿತಿ ಉಂಟಾಗಿರುವುದರಿಂದ ವಾಹನ ಸವಾರರು ಸ್ವಲ್ಪ ಮೈ ಮರೆತರು ಆಸ್ವತ್ರೆ ಸೇರುವುದು ಖಚಿತ. ಹಾಡ್ಯ, ಗೊಲ್ಲರಕೊಪ್ಪಲು, ಸಕ್ಕರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರಾದರೂ, ಚುನಾಯಿತ ಜನಪ್ರತಿನಿಧಿಗಳು ರಸ್ತೆಯನ್ನು ಅಭಿವೃದ್ಧಿಪಡಿಸದೆ ಜಾಣ ಕುರುಡು ಪ್ರದರ್ಶಿಸುತ್ತಾರೆ. ಡಾಂಬರೀಕರಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರು ಸಂಬಂಧಿಸಿದವರು ಇತ್ತ ಗಮನಹರಿಸಿ ರಸ್ತೆ ಅಭಿವೃದ್ದಿಗೆ ಮುಂದಾಗ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement