ಸಮ್ಮೇಳನಾಧ್ಯಕ್ಷ ನಟರಾಜ ಸ್ವಾಮೀಜಿ ಅವರನ್ನು ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಬೆಳಗ್ಗೆ ಶಾಸಕರ ಗೈರು ಹಾಜರಿಯಲ್ಲಿ ತಹಸೀಲ್ದಾರ್ ವೆಂಕಟಾಚಲಪ್ಪ ರಾಷ್ಟ್ರಧ್ವಜಾರೋಹಣ ನೆರವೇರಿಸಿದರೆ, ಕಸಾಪ ಜಿಲ್ಲಾಧ್ಯಕ್ಷ ಚಂದ್ರಶೇಖರ್ ನಾಡಧ್ವಜವನ್ನು, ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ಉಮಾಪತಿ ಪರಿಷತ್ತಿನ ಧ್ವಜಾರೋಹಣ ಮಾಡಿದರು.
ಪಟ್ಟಣದ ರಂಗನಾಥ ಬಡಾವಣೆಯಿಂದ ತಾಯಿ ಭುವನೇಶ್ವರಿ ದೇವಿ ಹೊತ್ತ ವಿಗ್ರಹವನ್ನು ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನಂದಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ನಟರಾಜ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್. ಉಮಾಪತಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ಮೆರವಣಿಗೆಯಲ್ಲಿ ಮೈಸೂರಿನ ಸಿದ್ದಲಿಂಗಪುರದ ಶಿವಕುಮಾರ ತಂಡದಿಂದ ವೀರಗಾಸೆ ಕುಣಿತ, ಚಾಮರಾಜನಗರದ ಗೊರವರ ಕುಣಿತ, ರಾಮನಗರದ ಡೊಳ್ಳುಕುಣಿತ, ನಂದಿಕುಣಿತ, ಗಾವಡಗೆರೆಯ ಶ್ರೀ ನಂಜುಂಡೇಶ್ವರ ವಿದ್ಯಾಸಂಸ್ಥೆಯ ಕಲಾತಂಡಗಳು ವೀರಗಾಸೆ ಕುಣಿತ, ಪೂಜಾಕುಣಿತ, ವಿದ್ಯಾರ್ಥಿಗಳ ಡೊಳ್ಳುಕುಣಿತ, ಪಟ್ಟಣದ ಮಹಿಳಾ ಸಮುಖ್ಯಾ ಶಾಲೆಯ ವಿದ್ಯಾರ್ಥಿನಿಯರು ಕಂಸಾಳೆ ನೃತ್ಯದ ಮೂಲಕ ಮೆರವಣಿಗೆಗೆ ರಂಗು ತಂದರು. ಡೀಡ್ ಸಂಸ್ಥೆಯಿಂದ ಆದಿವಾಸಿಗಳು ಬಳಸುತ್ತಿದ್ದ ಚಕ್ರವಿಲ್ಲದ ಗಾಡಿಯನ್ನು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
Advertisement