ಫಾರ್ಮಸಿ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ
ಮೈಸೂರು: ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲದ ವತಿಯಿಂದ ಫಾರ್ಮಸಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣದ ಬಗ್ಗೆ ಒಂದು ದಿನದ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಬುಧವಾರ ಕಾಲೇಜು ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಉಪ ಔಷಧ ನಿಯಂತ್ರಕ ನಾಗರಾಜ್ ಮಾತನಾಡಿ, ನಾಯಕತ್ವ ಗುಣವು ವ್ಯಕ್ತಿಯ ಸಾಧನೆಗೆ ಪೂರಕವಾದದು. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡರೆ ಮುಂದಿನ ಜೀವನವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಬಹುದು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ನಾಯಕತ್ವ ಗುಣ ಬೆಳೆಸಿಕೊಳ್ಳುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಚ್.ಎನ್. ವಿಶ್ವನಾಥ್, ಪ್ರದ್ಯುಮ್ನ, ಶ್ರೀಹರಿ ಉಪನ್ಯಾಸ ನೀಡಿದರು. ಜೆಎಸ್ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಪಿ.ಕೆ.ಕುಲಕರ್ಣಿ, ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಷಿ ಇದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಹೆರಿಟೇಜ್ ಸಿಟಿ ಮತ್ತು ಸಂಚಿಕ್ರಿಯೇಷನ್ಸ್ ಮೈಸೂರು ಸಹಯೋಗದಲ್ಲಿ ಸಂಜನಾ ಸ್ಮಾರಕ 6ನೇ ವರ್ಷದ ಪ್ರತಿಭಾ ಪುರಸ್ಕಾರದ ಸಹಾಯಧನ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮೈಸೂರು- ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಆಸಕ್ತರು ಅ. 20 ರೊಳಗೆ ಸಂಚಿ ಕ್ರಿಯೇಷನ್ಸ್, ನಂ. ಎಲ್122, ನೂಪುರ 4ನೇ ತಿರುವು, 2ನೇ ಮುಖ್ಯರಸ್ತೆ, ಗಂಗೋತ್ರಿ ಹುಡ್ಕೋ, ಮೈಸೂರು- 9. ಈ ವಿಳಾಸಕ್ಕೆ ಸಲ್ಲಿಸಬಹುದು. ಮೊ. 94806 31186, 94819 41186 ಸಂಪರ್ಕಿಸಬಹುದು.
ವಿದ್ಯಾರ್ಥಿನಿ ವಿಭಾಗೆ ಪ್ರಶಸ್ತಿ
ಮೈಸೂರು: ವಿಜ್ಞಾನ ವಿಷಯದಲ್ಲಿ ಉಪನ್ಯಾಸ ನೀಡಿದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕೆ.ಆರ್. ವಿಭಾ ವಾಸು ಅವರಿಗೆ ಪ್ರಶಸ್ತಿ ಸಂದಿದೆ. ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ವಿಜ್ಞಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಸತತವಾಗಿ 48 ಗಂಟೆಗಳ ಫೋಟೋ ಎಲೆಕ್ಟ್ರಿಕ್ ಎಫೆಕ್ಟ್ ಎಂಬ ವಿಷಯ ಕುರಿತು ತಮ್ಮ ಮನೋಜ್ಞ ಉಪನ್ಯಾಸ ನೀಡಿದುದಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪುರಸ್ಕೃತರನ್ನು ಮಹಾಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಪ್ರಾಂಶುಪಾಲ ಪ್ರೊ.ಕೆ.ವಿ. ಪ್ರಭಾಕರ್, ರೋಟರಿ ಸಂಸ್ಥೆಯ ದಿನೇಶ್ ಸೋಲಂಕಿ ಅಭಿನಂದಿಸಿದರು.
ಫ್ಯಾಶನ್ ಶೋ ಸ್ಪರ್ಧೆ
ಮೈಸೂರು: ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ವತಿಯಿಂದ ಆ.31 ರಂದು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಅಂತರ ಕಾಲೇಜು ಫ್ಯಾಶನ್ ಶೋ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸಂಬಂಧ ಆ.9 ರಂದು ನಗರದ ಹೋಟೆಲ್ ಕೋರಂನಲ್ಲಿ ಆಡಿಷನ್ ನಡೆಯಲಿದ್ದು, ನಗರದ ವಿವಿಧ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನಿಂದ ಸುಮಾರು 170 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸುವರು. ಇವರಲ್ಲಿ 25 ವಿದ್ಯಾರ್ಥಿನಿಯರು ಮತ್ತು 25 ಮಂದಿ ವಿದ್ಯಾರ್ಥಿಗಳನ್ನು ಆ.31ರ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುವುದು. ಅಲ್ಲಿ ಅಂತಿಮವಾಗಿ ಮಿಸ್ಟರ್ ಮೈಸೂರ್ ಮತ್ತು ಮಿಸ್ಟ್ರೆಸ್ ಮೈಸೂರ್ ಆಯ್ಕೆ ಮಾಡಲಾಗುವುದು ಎಂದು ಕ್ಲಬ್ ಅಧ್ಯಕ್ಷೆ ರತ್ನ ಪ್ರಶಾಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮವನ್ನು ನಿಧಿ ಸಂಗ್ರಹಣೆಗಾಗಿ ನಡೆಸಲಾಗುತ್ತಿದೆ. ಹಳ್ಳಿಗಾಡಿನ ಪ್ರದೇಶಗಳಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ ಇರುವುದು ಕಂಡುಬಂದಿದೆ. ಇಂತಹ ಶಾಲೆಗಳಿಗೆ ದೇಣಿಗೆ ನೀಡಲು ನಿಧಿ ಸಂಗ್ರಹಿಸಲಾಗುತ್ತಿದೆ. ಮೊ. 98454 94520, 99720 32843 ಸಂಪರ್ಕಿಸಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ