ಧರ್ಮಾಪುರ ನಾರಾಯಣ
ಕ.ಪ್ರ. ವಾರ್ತೆ, ಹುಣಸೂರು, ಆ.6
ಸಾಹಿತ್ಯವು ದಿನನಿತ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹಸನುಗೊಳಿಸುವ ದಿಕ್ಕಿನಲ್ಲಿ ಮುಂದುವರಿಯಬೇಕೆಂದು ಸಮ್ಮೇಳನದ ಸರ್ವಾಧ್ಯಕ್ಷ ನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಮುನೇಶ್ವರ ಮೈದಾನದಲ್ಲಿ ನಡೆದ ಹುಣಸೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯವು ಧರ್ಮ ಮತ್ತು ವಿಜ್ಞಾನಗಳ ಆಧಾರ ಸ್ತಂಭಗಳ ಮೇಲೆ ನಿಂತು ಅಜ್ಞಾನವನ್ನಳಿಸಿ ಸುಜ್ಞಾನ ನೀಡಿ, ಅಂಧಶ್ರದ್ಧೆ ವಿರುದ್ಧ ಧ್ವನಿ ನೀಡುವಂತಾಗಬೇಕು. ಸಾಹಿತ್ಯವು ದೈನಂದಿನ ಬದುಕಿನ ಕೊಳೆಗಳನ್ನು ತೊಳೆಯುವ ಮಾಪನವಾಗಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನಗಳು ಬರೀ ಜಾತ್ರೆಗಳಲ್ಲವೆಂಬುದನ್ನು ರುಜುವಾತುಪಡಿಸುವೆ. ಇಲ್ಲಿನ ಆಶಯಗಳು ಕನ್ನಡದ ವಾತಾವರಣವನ್ನು ಎಲ್ಲೆಡೆ ಪಸರಿಸಬೇಕಿದ್ದು, ಈ ದಿಸೆಯಲ್ಲಿ ನಮ್ಮ ಸರ್ಕಾರ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಹಲವು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ಇಂದಿಗೂ ಕನ್ನಡದ ಮೂಲ ಸಮಸ್ಯೆಯನ್ನು ಪರಿಹರಿಸದಿರುವುದು ದೌರ್ಭಾಗ್ಯವೇ ಸರಿ ಎಂದರು.
ಎಲ್ಲರೂ ಹೊಣೆ ಹೊರಬೇಕು: ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿ, ಕನ್ನಡಿಗರ ನಿರಾಭಿಮಾನದಿಂದಾಗಿ ಮಹಾರಾಷ್ಟ್ರದ ಮಂದಿ ನಮ್ಮ ನಾಡಿನಲ್ಲಿ ಮರಾಠಿಯಲ್ಲಿ ನಾಮಫಲಕ ಹಾಕಿದ್ದಾರೆ. ಇದಕ್ಕೆ ಎಲ್ಲರೂ ಹೊಣೆ ಹೊರಬೇಕಿದೆ, ನಮ್ಮಲ್ಲಿ ಕನ್ನಡ ಉಳಿಸುವ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಬೇಕಿರುವುದು ದುರ್ದೈವದ ಸಂಗತಿ. ನಾಡಗೀತೆಯನ್ನು ಪರಿಷ್ಕರಣೆ ಮಾಡಿರುವ ಚನ್ನವೀರ ಕಣವಿಯವರ ಗೀತೆಯನ್ನು ಹಾಡಲು ಸರ್ಕಾರ ಶೀಘ್ರ ಅನುಮತಿ ನೀಡಬೇಕೆಂದು ಆಗ್ರಹಿಸಿದರು. ಕಸಾಪ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟ ಪೂರ್ವ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಉಮಾಪತಿ, ಕಾರ್ಯದರ್ಶಿ ವಸಂತ ಮಂಜುನಾಥ್, ರಮೇಶ್, ಪುಟ್ಟರಾಜು, ವಿ.ಎನ್. ದಾಸ್, ಪುಟ್ಟಶೆಟ್ಟಿ ಮಾತನಾಡಿದರು.
ದಲಿತ ಮುಖಂಡರ ಆಕ್ಷೇಪ: ಸಮ್ಮೇಳನದಲ್ಲಿ ದಲಿತ ಮುಖಂಡರಾದ ನಿಂಗರಾಜ ಮಲ್ಲಾಡಿ, ಡಿ.ಕುಮಾರ್, ಸಿಪಿಐನ ಬಸವರಾಜು ವಿ.ಕಲ್ಕುಣಿಕೆ ವೇದಿಕೆ ಮುಂದೆ ಬಂದು ಸಮ್ಮೇಳನದಲ್ಲಿ ದಲಿತರಿಗೆ ಅವಮಾನ ಮಾಡಲಾಗಿದೆ. ವೇದಿಕೆಯಲ್ಲಿ ಎಲ್ಲ ಜನಾಂಗದವರೂ ಇದ್ದೀರಿ. ಆದರೆ ದಲಿತ ಜನಾಂಗಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲವೇಕೆ ದಲಿತರು ಈ ನಾಡಿಗಾಗಿ, ಭಾಷೆಗಾಗಿ ದುಡಿದಿಲ್ಲವೇ ರಾಜ್ಯದ ಅಭಿವೃದ್ಧಿಗೆ ನಮ್ಮ ಕೊಡುಗೆ ಇಲ್ಲವೆ ಎಂದು ಪ್ರಶ್ನಿಸಿ ಆಕ್ರೋಶಭರಿತರಾಗಿ ಕೂಗಲು ಪ್ರಾರಂಭಿಸಿದಾಗ ಇಡೀ ಸಭೆ ಗಲಿಬಿಲಿ ಉಂಟಾಯಿತು.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ವಾಧ್ಯಕ್ಷರು ಕಾರ್ಯಕ್ರಮ ರೂಪುರೇಷೆಗಳನ್ನು ರೂಪಿಸುವಾಗ ತಾವು ವಿದೇಶ ಪ್ರವಾಸದಲ್ಲಿದ್ದೆ. ಇಲ್ಲಿ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ಯಾರಿಗೂ ನೋವುಂಟು ಮಾಡುವ ಅಧಿಕಾರ ಯಾರಿಗೂ ಇಲ್ಲ. ನಿಮ್ಮದೇ ಕಾರ್ಯಕ್ರಮ ನಡೆಸಿಕೊಡಿ ಎಂಜು ಮನವಿ ಮಾಡಿದರು. ಕೂಡಲೇ ಪೊಲೀಸರು ವೇದಿಕೆ ಮುಂಭಾಗ ಬಂದು ಪ್ರತಿಭಟನಾಕಾರರನ್ನು ಸಮಾಧಾನಿಸಿ ಕರೆದೊಯ್ದರು. ನಂತರ ಸಭೆ ಸಹಜಸ್ಥಿತಿಗೆ ಬಂದು ಕಾರ್ಯಕ್ರಮ ಮುಂದುವರೆಯಿತು.
ಸಮಾರಂಭದಲ್ಲಿ ವಿರಾಜಪೇಟೆಯ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಾದಳ್ಳಿಯ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್. ಉಮಾಪತಿ, ಕಾರ್ಯದರ್ಶಿ ವಸಂತ ಮಂಜುನಾಥ್, ಮುಖಂಡರಾದ ಮಡ್ಡಿಕೆರೆ ಗೋಪಾಲ್, ವೈ.ಡಿ. ರಾಜಣ್ಣ, ಮೂಗುರು ನಂಜುಂಡಸ್ವಾಮಿ, ಪುರಸಭಾಧ್ಯಕ್ಷೆ ವಹೀದಾ ಬಾನು, ಉಪಾಧ್ಯಕ್ಷೆ ಧನಲಕ್ಷ್ಮೀ, ಡೀಡ್ ಶ್ರೀಕಾಂತ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಎಸ್.ವೆಂಕಟಪ್ಪ, ಉಪವಿಭಾಗಾಧಿಕಾರಿ ಕೆ.ಎಸ್.ಜಗದೀಶ್, ತಹಸೀಲ್ದಾರ್ ವೆಂಕಟಾಚಲಪ್ಪ, ಪುರಸಭಾ ಮುಖ್ಯಾಧಿಕಾರಿ ಎ.ರಮೇಶ್ ಇದ್ದರು.
ಇದೇ ವೇಳೆ ಪಟ್ಟಣದ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ ವಿರಚಿತ ರಾಜ್ಯಶಾಸ್ತ್ರ ವಿಭಾಗದ 6 ಪಠ್ಯಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Advertisement