ಮೈಸೂರು: ನಗರ ಪಾಲಿಕೆ ವಾರ್ಡ್ 1ರ ವ್ಯಾಪ್ತಿಯ ತೊಗರಿಬೀದಿ, ರಮಾವಿಲಾಸ ರಸ್ತೆಯ ಸುತ್ತಮುತ್ತಲ ಮನೆ ಮನೆಗೆ ಉಚಿತವಾಗಿ ನಗರ ಪಾಲಿಕೆ ವತಿಯಿಂದ ಕಸದ ಪ್ಲಾಸ್ಟಿಕ್ ಡಬ್ಬಗಳನ್ನು ವಿತರಿಸಲಾಯಿತು. ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಕಸದ ಡಬ್ಬ ವಿತರಣೆಗೆ ಚಾಲನೆ ನೀಡಿದರು. ಹಸಿ ಕಸ ಮತ್ತು ಒಣ ಕಸ ಹಾಕಲು ಪ್ರತಿ ಮನೆಗೆ ಕೆಂಪು ಮತ್ತು ಹಸಿರು ಬಣ್ಣದ ಡಬ್ಬ ವಿತರಿಸಿದರು. ಡಬ್ಬ ವಿತರಣೆ ವೇಳೆ ಮನೆಯವರಿಂದ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಸಹಿ ಪಡೆಯಲಾಯಿತು. ಅಲ್ಲದೆ ಸಾರ್ವಜನಿಕರಿಗೆ ಹಸಿ ಕಸ ಮತ್ತು ಒಣ ಕಸದ ವಿಂಗಡಣೆ ಬಗ್ಗೆ ತಿಳಿಸಲಾಯಿತು. ಜೊತೆಗೆ ಕೆಂಪು ಡಬ್ಬದ ಒಣ ಕಸವನ್ನು ವಾರಕ್ಕೆ ಒಮ್ಮೆ ಹಾಗೂ ಹಸಿ ಕಸವನ್ನು ಪ್ರತಿದಿನ ಪಾಲಿಕೆಯ ಪೌರ ಕಾರ್ಮಿಕರಿಗೆ ನೀಡುವಂತೆ ಸೂಚಿಸಲಾಯಿತು. ಮೊದಲ ದಿನ 150 ಮನೆಗಳಿಗೆ ಕಸದ ಡಬ್ಬ ವಿತರಿಸಿ ಸಹಿ ಪಡೆಯಲಾಯಿತು. ಮುಂದಿನ ದಿನಗಳಲ್ಲಿ ಪ್ರತಿ ಮನೆಗೂ ಕಸದ ಡಬ್ಬ ವಿತರಿಸುವುದಾಗಿ ಮಂಜುನಾಥ್ ಭರವಸೆ ನೀಡಿದರು. ಪಾಲಿಕೆ ವಲಯ ಕಚೇರಿ ಆಯುಕ್ತ ಸತ್ಯಮೂರ್ತಿ, ಆರೋಗ್ಯ ಪರಿವೀಕ್ಷಕ ಪ್ರಭಾಕರ್, ಪರಿಸರ ಎಂಜಿನಿಯರ್ ವಿಜಯ, ಸಾಮಾಜಿಕ ಕಾರ್ಯಕರ್ತ ಬೈರಪ್ಪ ಇದ್ದರು.
ಪರೀಕ್ಷಾ ಭಯದಿಂದ ಹೊರಬನ್ನಿ
ಮೈಸೂರು: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಹೊರಬಂದು ಸಮರ್ಥವಾಗಿ ಪರೀಕ್ಷೆ ಎದುರಿಸಲು ಸಿದ್ಧರಾಗುವಂತೆ ಎನ್ಇಎಲ್ಪಿ ಸಮಾಲೋಚಕ ಡಾ.ಎನ್.ಎನ್. ಪ್ರಹ್ಲಾದ್ ಕರೆ ನೀಡಿದರು. ವಿಶ್ವೇಶ್ವರನಗರದಲ್ಲಿರುವ ಸಂತ ಥಾಮಸ್ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯವಸ್ಥಿತ ಸಿದ್ಧತೆಯೊಂದಿಗೆ ಓದಬೇಕು. ಪರೀಕ್ಷೆ ಬಗೆಗಿನ ಎಲ್ಲ ಭಯಗಳನ್ನು ತಿರಸ್ಕರಿಸಬೇಕು. ಮುಕ್ತ ಮನಸ್ಸಿನಿಂದ ಇರಬೇಕು. ಪ್ರತಿದಿನ 30 ನಿಮಿಷವಾದರೂ ಬರೆಯಬೇಕು. ಪಠ್ಯವನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಂಡು ಸ್ಮರಣೆ ಮಾಡಿಕೊಳ್ಳಬೇಕು. ಪ್ರತಿದಿನ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಾ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು. ಎಲ್ಲ ಕೆಲಸವೂ ತನ್ನಿಂದಾಗುತ್ತದೆ. ಎಲ್ಲವನ್ನು ಮಾಡಿ ಮುಗಿಸುತ್ತೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಸಂತ ಥಾಮಸ್ ಶಾಲೆಯ ವ್ಯವಸ್ಥಾಪಕ ಎಂ.ಒ. ಓಮನ್ ಅಧ್ಯಕ್ಷತೆ ವಹಿಸಿದ್ದರು.
ಆರ್ಟಿಇ ದುರ್ಬಲಗೊಳಿಸುತ್ತಿರುವ ಸರ್ಕಾರ
ಮೈಸೂರು: ಆರ್ಟಿಇ ಕಾಯ್ದೆಯನ್ನು ರಾಜ್ಯ ಸರ್ಕಾರವು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು. ಆರ್ಟಿಇ ಕಾಯ್ದೆ ಅನ್ವಯ ಮಕ್ಕಳ ಪ್ರವೇಶಾತಿ ಮಾನದಂಡವನ್ನು ಅಲ್ಪಸಂಖ್ಯಾತ ಶಾಲೆಗಳಿಗೆ ಶೇ.75 ರಿಂದ ಶೇ.25ಕ್ಕೆ ಇಳಿಸುವ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವು ಖಂಡನಿಯ. ಇದರ ಹಿಂದೆ ಖಾಸಗಿ ಅನುದಾನ ರಹಿತ ಅಲ್ಪಸಂಖ್ಯಾತ ಶಾಲಗಳ ದೊಡ್ಡ ಲಾಬಿ ನಡೆದಿದೆ ಎಂದು ಅವರು ಆರೋಪಿಸಿದರು.
ಯಾವುದೇ ಕಾರಣಕ್ಕೂ ಮಕ್ಕಳ ಪ್ರವೇಶಾತಿ ಮಾನದಂಡವನ್ನು ಶೇ.75 ರಿಂದ 25ಕ್ಕೆ ಇಳಿಸಬಾರದು. ಇದರಿಂದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಅವರು ಆಗ್ರಹಿಸಿದರು. ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ, ಮುಖಂಡರಾದ ಎಂ.ಬಿ. ಪ್ರಭುಶಂಕರ್, ಜೆ.ಪಿ. ಗೌಡ, ಜಗದೀಶ್, ರಾಜೇಶ್, ರಘುರಾಮ್, ಪಿ. ಪ್ರಜೀಶ್, ಪ್ರಕಾಶ್, ಕೃಷ್ಣ, ನಂಜುಂಡಸ್ವಾಮಿ, ಶಾಂತಮೂರ್ತಿ, ಪ್ರದೀಪ್, ನಾಗಣ್ಣ ಇದ್ದರು.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಎಐಎಂಎಸ್ಎಸ್ ಖಂಡನೆ
ಮೈಸೂರು: ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರವನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡಿಸಿದೆ. ಪೊಲೀಸರ ಸೋಗಿನಲ್ಲಿ ದುಷ್ಕರ್ಮಿಗಳು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಯುವತಿ ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕೃತ್ಯದಲ್ಲಿ ಪ್ರಭಾವಶಾಲಿಗಳ ಮಕ್ಕಳು ಸಹ ಸೇರಿದ್ದಾರೆ. ಆದ್ದರಿಂದ ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದೆ.
ಬೆಳೆ ಪರಿಹಾರ ಅವ್ಯವಹಾರ
ತನಿಖೆಗೆ ಜಿಲ್ಲಾಧಿಕಾರಿ ಆದೇಶ
ಮೈಸೂರು: ರೈತರಿಗೆ ನೀಡುವ ಬೆಳೆ ಪರಿಹಾರದ ಚೆಕ್ ವಿತರಣೆಯಲ್ಲಿ ಗ್ರಾಮ ಲೆಕ್ಕಿಗ ಅವ್ಯವಾಹರ ನಡೆಸಿರುವುದು, ಸತ್ತವರ ಹೆಸರಿನಲ್ಲಿ ಚೆಕ್ ಡ್ರಾ ಮಾಡಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದುಕೊರತೆ ಆಲಿಸುವ ಫೋನ್ ಇನ್ ಕಾರ್ಯಕ್ರಮದಲ್ಲಿ ಎಚ್.ಡಿ. ಕೋಟೆ ತಾಲೂಕಿನ ಎಂ. ಕನ್ನೇಹಳ್ಳಿ ನಿವಾಸಿ ವಸಂತಕುಮಾರ್ ಎಂಬವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಪಂ ವ್ಯಾಪ್ತಿಯಲ್ಲಿ 164 ರೈತರಿಗೆ ಬೆಳೆ ಪರಿಹಾರ ಚೆಕ್ ಬಂದಿದೆ. ಇದರಲ್ಲಿ 75 ಚೆಕ್ಗಳನ್ನು ಅಕ್ಕಪಕ್ಕದ ಗ್ರಾಮಸ್ಥರ ಹೆಸರು, ಸತ್ತವರ ಹೆಸರು, ರೈತರಲ್ಲದವರ ಫೋಟೋಗಳನ್ನು ಅಂಟಿಸಿದ್ದಾರೆ. ಅವರ ಹೆಸರಿನಲ್ಲಿ ಚೆಕ್ ಹಾಕಿ ಬ್ಯಾಂಕಿನಿಂದ ಹಣ ಡ್ರಾ ಸಹ ಮಾಡಿಕೊಂಡಿದ್ದಾರೆ. ಈ ಅವ್ಯವಹಾರದಲ್ಲಿ ಗ್ರಾಮ ಲೆಕ್ಕಿಗ ದೇವೇಗೌಡ ಭಾಗಿಯಾಗಿದ್ದಾರೆ ಎಂದು ವಸಂತಕುಮಾರ್ ದೂರಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪ್ರಭಾರ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಅವರು, ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಚ್.ಡಿ. ಕೋಟೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಅತ್ಯಾಚಾರ ಖಂಡಿಸಿ ಎಬಿವಿಪಿ ಪ್ರತಿಭಟನೆ
ಮೈಸೂರು: ಬೆಂಗಳೂರಿನ ಪುಲಿಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಗೆಳೆಯನ ಸಮ್ಮುಖದಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ನಾಸೀರ್ ಹೈದರ್ನನ್ನು ಗಲ್ಲಿಗೇರಿಸಬೇಕು. ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಅತ್ಯಾಚಾರ ದೂರು ನೀಡಿದರೂ ಬೆದರಿಕೆ ಪ್ರಕರಣ ದಾಖಲಿಸಿ ಉದಾಸೀನ ತೋರಿದ ಪುಲಿಕೇಶಿನಗರ ಠಾಣೆಯ ಇನ್ಸ್ಪೆಕ್ಟರ್ ಮೊಹಮ್ಮದ್ ರಫೀಕ್ನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ಮಾರತ್ಹಳ್ಳಿ ಖಾಸಗಿ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳಿಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೈಂದೂರಿನ ಆಲಂದೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ವಿಚಾರದಲ್ಲಿ ಗೃಹ ಸಚಿವರು ಕೊಡುತ್ತಿರುವ ಹಾರಿಕೆಯ ಆಶ್ವಾಸನೆ ಸರಿಯಲ್ಲ ಎಂದು ಖಂಡಿಸಿದರು.
ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಮೊದಲಾದ ಲೈಂಗಿಕ ಕ್ರೌರ್ಯಗಳನ್ನು ಕೊನೆಗೊಳಿಸಲು ಸರ್ಕಾರ ಮುಂದಾಗಬೇಕು. ವಿಧಾನಸಭಾ ಅಧಿವೇಶನದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಚರ್ಚಿಸುವುದು ಮಾತ್ರವಲ್ಲದೇ ಸಾಮಾಜಿಕ ಬದ್ಧತೆ ತೋರಿಸಬೇಕು. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಬಲ ಕಾನೂನು ರೂಪಿಸಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಎಬಿವಿಪಿ ಮುಖಂಡರಾದ ಭಾಗ್ಯಶ್ರೀ, ನಾಗೇಂದ್ರಸ್ವಾಮಿ, ಚಂದನ, ಮಹದೇವಪ್ರಸಾದ್, ಪವಿತ್ರಾ, ರಶ್ಮಿ, ಸಂಗೀತಾ, ಸ್ಮಿತಾ, ಮಧು ಇದ್ದರು.
ಬಜೆಟ್ ಕುರಿತ ಚರ್ಚೆ
ಮೈಸೂರು: ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಜು. 19ರ ಬೆಳಗ್ಗೆ 11ಕ್ಕೆ ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಕೇಂದ್ರ ಬಜೆಟ್ ಕುರಿತ ಚರ್ಚೆ ಹಾಗೂ ಜು. 23ರ ಸಂಜೆ 4ಕ್ಕೆ ಇಂಧನ ಸಂರಕ್ಷಣೆ ಕುರಿತು ವಿಚಾರ ಸಂಕಿರಣವನ್ನು ಸದರಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.
ಉದ್ಯೋಗಾಧಾರಿತ ಶಿಕ್ಷಣ ಅಗತ್ಯ
ಹುಣಸೂರು: ಸ್ಪರ್ಧಾತ್ಮಕ ಯುಗದಲ್ಲಿ ಐಟಿಐ ವೃತ್ತಿ ಶಿಕ್ಷಣವು ನಿರುದ್ಯೋಗ ನಿವಾರಿಸುವ ತಾಣ. ಇಲ್ಲಿ ತರಬೇತಿ ಪಡೆದವರು ಒಂದಿಲ್ಲೊಂದು ಉದ್ಯೋಗ ಗಿಟ್ಟಿಸುತ್ತಾರೆ ಎಂದು ಹಿರಿಯ ಮೋಟಾರ್ ವಾಹನ ನಿರೀಕ್ಷಕ ಗಂಗಾಧರ್ ಅಭಿಪ್ರಾಯಪಟ್ಟರು.
ಪಟ್ಟಣದ ಸತ್ಯಸಾಯಿ ಕೈಗಾರಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಕರ ಸಭೆ, ವಿದ್ಯಾರ್ಥಿಗಳಿಗೆ ವೇತನದ ಚೆಕ್ ವಿತರಸಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಐಟಿಐ ಉದ್ಯೋಗಾರಿತ ತರಬೇತಿ ಕೋರ್ಸ್ ಆಗಿದ್ದು, ಬೃಹತ್ ಕಾರ್ಖಾನೆಗಳಲ್ಲಿ ಫಿಟ್ಟರ್, ಎಲೆಕ್ಟ್ರೀಷಿಯನ್ ಮೆಕಾನಿಕ್, ಕೋಪಾ (ಕಂಪ್ಯೂಟರ್) ವೆಲ್ಡರ್ಗಳು ಅತ್ಯವಶ್ಯಕ. ಅದರಲ್ಲೂ ಕೆಎಸ್ಆರ್ಟಿಸಿಯಲ್ಲಿ ಸೇವೆ ಅಗತ್ಯ. ತರಬೇತಿ ಪಡೆದವರ ಆಯ್ಕೆಗೆ ಸಾಕಷ್ಟು ವಿಫಲ ಅವಕಾಶವಿದ್ದು, ತರಬೇತಿ ಅವಧಿಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ, ಸಂಸ್ಥೆಯ ಆಡಳಿತಾಧಿಕಾರಿ ಡಿ.ತಮ್ಮಣ್ಣ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.
ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಮುರುಳೀಧರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಸ್. ಜಯರಾಂ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಸ್ಕರ್, ಪ್ರಾಂಶುಪಾಲ ಭಾನುಪ್ರಕಾಶ್, ತರಬೇತುದಾರ ಕಿರಣ್ ಇದ್ದರು.
ಮರಳು ಪರ್ಮಿಟ್ಗೆ ಆಗ್ರಹಿಸಿ ಪ್ರತಿಭಟನೆ
ಟಿ. ನರಸೀಪುರ: ಗ್ರಾಪಂ ವ್ಯಾಪ್ತಿಯಲ್ಲಿಯೇ ಮರಳು ಸಾಗಾಣಿಕೆಗೆ ಪರ್ಮಿಟ್ ವಿತರಣೆ ಮಾಡುವಂತೆ ಆಗ್ರಹಿಸಿ ಎತ್ತಿನಗಾಡಿ ಮಾಲೀಕರು ಮತ್ತು ಕೂಲಿ ಕಾರ್ಮಿಕರು ಪಟ್ಟಣದಲ್ಲಿ ಗುರುವಾರ ಪ್ರತಿಭಟಿಸಿದರು.
ಪಟ್ಟಣದ ಹಳೇ ತಿರುಮಕೂಡಲು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಎತ್ತಿನಗಾಡಿ ಮಾಲೀಕರು ಮತ್ತು ಕೂಲಿ ಕಾರ್ಮಿಕರು, ಹೊಸ ತಿರುಮಕೂಡಲು ವೃತ್ತದಲ್ಲಿ ಅರ್ಧ ತಾಸುಗಳ ಕಾಲ ರಸ್ತೆ ತಡೆ ನಡೆಸಿದರು. ನಂತರ ಜೋಡಿ ಹಾಗೂ ಲಿಂಕ್ ರಸ್ತೆಗಳ ಮೂಲಕ ಲೋಕೋಪಯೋಗಿ ಕಚೇರಿ ಆವರಣಕ್ಕೆ ತೆರಳಿ ಧರಣಿ ನಡೆಸಿದರು.
ಸಂಘದ ಅಧ್ಯಕ್ಷ ಪುಟ್ಟು ಮಾತನಾಡಿ, ಎತ್ತಿನ ಗಾಡಿಗಳಲ್ಲಿ ಮರಳು ಸಾಗಣೆ ಮಾಡಲು ತಾಲೂಕಿನ ಆಯಾಯ ಗ್ರಾಪಂಗಳಲ್ಲಿ ಕಡಮೆ ದರದಲ್ಲಿ ವಿತರಣೆ ಮಾಡಬೇಕು. ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಣೆ ಎಂದು ವಶಪಡಿಸಿಕೊಂಡಿರುವ ಬಡ ಕೂಲಿ ಕಾರ್ಮಿಕರ ಎತ್ತಿನ ಗಾಡಿಗಳನ್ನು ದಂಡ ವಿಧಿಸದೆ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಎಇಇ ವಿನಯ್ಕುಮಾರ್ ಮಾತನಾಡಿ ಇನ್ನೆರಡು ದಿನಗಳಲ್ಲಿ ನಡೆಯುವ ಮರಳು ಸಮಿತಿ ಸಭೆಯಲ್ಲಿ ಪರ್ಮಿಟ್ ನೀಡುವ ಸಂಬಂಧ ಸ್ಪಷ್ಟ ಸೂಚನೆ ಬರುವುದರಿಂದ ಮುಷ್ಕರ ಹಿಂಪಡೆಯಬೇಕೆಂದು ತಿಳಿಸಿದರು. ಅಧಿಕಾರಿಗಳ ಭರವಸೆಯನ್ನು ಪ್ರತಿಭಟನಾಕಾರರು ಒಪ್ಪದೆ ಧರಣಿ ಮುಂದುವರಿಸಿದರು. ಸಂಘದ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ದೀಪು, ಮುಖಂಡರಾದ ಮೋಹನ್ಕುಮಾರ್, ಶೀನಾ, ದೀಪು, ರಜನಿ, ಚುಂಚಣ್ಣ, ರಘು ಇದ್ದರು.