ನಂಜನಗೂಡು: ಪಟ್ಟಣ ಪುರಸಭೆಯನ್ನು ಮೇಲ್ದರ್ಜೆಗೆ ಪರಿವರ್ತಿಸಿ ನಗರಸಭೆ ಸ್ಥಾನಮಾನ ನೀಡಿರುವ ಹಿನ್ನೆಲೆ ನಗರದ ಗಡಿ ವಿಸ್ತರಣೆಗೆ ತಕ್ಷಣದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ನಂಜನಗೂಡು ಪಟ್ಟಣ ನಗರಸಭೆಯಾಗಿ ಪರಿವರ್ತನೆಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಇಲ್ಲಿನ ಪುರಸಭಾಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಗಣ್ಯರಿಂದ ಗುರುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಅವರು ಮಾತನಾಡಿದರು. ನಂಜನಗೂಡು ನಗರಸಭೆಯಾಗಲು ಬೇಕಾದ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಹಂಡುವಿನಹಳ್ಳಿ, ದೇಬೂರು, ಗೋಳೂರು, ದೇವೀರಮ್ಮನಹಳ್ಳಿ ಹಾಗೂ ವಿದ್ಯಾನಗರ ಬಡಾವಣೆ ನಗರಸಭೆ ವ್ಯಾಪ್ತಿಗೆ ಸೇರಲಿದೆ ಎಂದು ತಿಳಿಸಿದರು.
ಪಟ್ಟಣದ ಹಲವು ಬಡಾವಣೆಗಳಲ್ಲಿ ಉತ್ತಮ ಪಾರ್ಕ್ ನಿರ್ಮಾಣಕ್ಕಾಗಿ 10 ಕೋಟಿ ಮಂಜೂರಾಗಿದ್ದು, ಈಗಾಗಲೇ 5 ಕೋಟಿ ಬಿಡುಗಡೆಯಾಗಿದೆ. ನಂಜನಗೂಡನ್ನು ಉಪನಗರವನ್ನಾಗಿ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಸಾಗಲು ಸಂಬಂಧಪಟ್ಟವರಿಗೆ ಸೂಚಿಸಿದೆ. ಅಧಿವೇಶನದ ನಂತರ ಉನ್ನತ ಅಧಿಕಾರಿಗಳ ಸಭೆಯನ್ನು ನಂಜನಗೂಡಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಎಂಡಿಎಯಿಂದ ಪಟ್ಟಣ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗಿದೆ. 24್ಢ7 ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿ ತ್ವರಿತ ಗತಿಯಲ್ಲಿ ನಡೆದಿದ್ದು, ಒಳಚರಂಡಿ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ, ಉಪಾಧ್ಯಕ್ಷ ದೊರೆಸ್ವಾಮಿ, ಕೆಪಿಸಿಸಿ ಸದಸ್ಯ ಕೆ.ಆರ್. ಮೋಹನ್ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಸ್.ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಮುಖಂಡರಾದ ಯು.ಎನ್. ಪದ್ಮನಾಭರಾವ್, ಕೃಷ್ಣಪ್ಪ, ಎನ್.ಶಿವಕುಮಾರ್, ಎಚ್.ವಿ.ಶಿವರಾಜಪ್ಪ, ಪುರಸಭಾ ಸದಸ್ಯರಾದ ಎನ್.ಎಂ.ಮಂಜುನಾಥ್, ಸುಧಾ ಮಹೇಶ್, ವೀಣಾವಿನಯ್, ಚಂದ್ರವತಿ ಅರಸ್, ಸುಂದರ್ರಾಜ್, ಸಿ.ಎಂ. ಶಂಕರ್, ಬಿ.ಚಲುವರಾಜ್, ನಟೇಶ್, ವರದರಾಜು, ಆನಂದ, ಮಾಜಿ ಅಧ್ಯಕ್ಷರಾದ ಎನ್.ಆರ್. ದೊರೆಸ್ವಾಮಿ, ಪಿ. ಶ್ರೀನಿವಾಸ್, ಎಂ. ಶ್ರೀಧರ್, ಮುಯೀರ್ ಇದ್ದರು.