20 ನಿಮಿಷ 20 ಸುದ್ದಿ

Updated on: 

ರೈತರ ಬದುಕು ಬವಣೆ ಬಿಂಬಿಸುವ ಬೀದಿ ನಾಟಕ
ಮೈಸೂರು: ಬೆಂಗಳೂರಿನ ಗೆಜ್ಜೆಹೆಜ್ಜೆ ತಂಡವು ನಡೆಸಿದ ಬೀದಿ ನಾಟಕ ಜಾತ್ರಾ ಮಹೋತ್ಸವದಲ್ಲಿ ನಗರದ ರಂಗಸಂಗಮ ತಂಡದ ಕಲಾವಿದರು ನಾನೂ ನನ್ನ ಕನಸು ಎಂಬ ರೈತರ ಬದುಕು ಬವಣೆ ಬಿಂಬಿಸುವ ಬೀದಿ ನಾಟಕವನ್ನು ನಗರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರದರ್ಶಿಸಿದರು. ನಗರ ಒಡನಾಡಿ ಸಂಸ್ಥೆಯಲ್ಲಿ ನಡೆದ ನಾಟಕ ಪ್ರದರ್ಶನವನ್ನು ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ  ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಹೂಟಗಳ್ಳಿ, ಬೆಳವಾಡಿ, ಸಾತಗಳ್ಳಿ, ಇಲವಾಲ, ಗರ್ಗೇಶ್ವರಿ, ಆಲನಹಳ್ಳಿ, ಜಯಪುರ, ಮಹದೇವಪುರ, 101 ಗಣಪತಿ ವೃತ್ತದಲ್ಲಿ ನಾಟಕ ಪ್ರದರ್ಶಿಸಿದರು. ಶಾಲಾ ಮಕ್ಕಳು, ಸಾರ್ವಜನಿಕರು ನಾಟಕವನ್ನು ವೀಕ್ಷಿಸಿ, ಕಲಾವಿದರನ್ನು ಪ್ರಶಂಸಿಸಿದರು.

ಜೆಎಸ್ಎಸ್ ಫಾರ್ಮ-ಡಿಗೆ ಎಸಿಪಿಇ ಮಾನ್ಯತೆ
ಮೈಸೂರು: ಮೈಸೂರು ಮತ್ತು ಊಟಿಯಲ್ಲಿನ ಜೆಎಸ್ಎಸ್ ಔಷಧ ವಿಜ್ಞಾನ ಕಾಲೇಜುಗಳು ನಡೆಸುತ್ತಿರುವ ಫಾರ್ಮ-ಡಿ ಕೋರ್ಸ್ಗೆ ಅಮೆರಿಕದ ಅಕ್ರೆಡಿಟೇಶನ್ ಕೌನ್ಸಿಲ್ ಆಫ್ ಫಾರ್ಮೆಸಿ ಎಜುಕೇಷನ್(ಎಸಿಪಿಇ) ಸಂಸ್ಥೆಯು ಅಂಗೀಕಾರ ನೀಡಿದೆ. ಜೆಎಸ್ಎಸ್ ಔಷಧ ವಿಜ್ಞಾನ ಕಾಲೇಜು ಈಗಾಗಲೆ ಐಎಸ್ಒ ಸಮರ್ಥನಾ ಪತ್ರ ಪಡೆದಿದೆ. ಜೆಎಸ್ಎಸ್ ವಿವಿಯು ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಟೇಷನ್ ಕೌನ್ಸಿಲ್ನಿಂದ ಎ ಮಾನ್ಯತೆ ಹೊಂದಿ 3.34 ರಷ್ಟು ಸಿಜಿಪಿಎ ಅಂಕಗಳನ್ನು ಗಳಿಸಿ ಉತ್ತಮ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ. ಜೆಎಸ್ಎಸ್ ವೈದ್ಯಕೀಯ ಕಾಲೇಜು ದೇಶದ ಅತ್ಯುತ್ತಮ ವೈದ್ಯಕೀಯ ಸಂಸ್ಥೆ ಎಂಬ ಖ್ಯಾತಿಗೆ ಒಳಗಾಗಿದೆ ಎಂದು ಜೆಎಸ್ಎಸ್ ವಿವಿ ಕುಲಪತಿ ಡಾ.ಬಿ.ಸುರೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಸಿಪಿಎ ಮಾನ್ಯತೆ ಪಡೆದ ಏಷ್ಯಾದ ಮೊದಲ ಸಂಸ್ಥೆ ನಮ್ಮದಾಗಿದ್ದು, ಗುಣಮಟ್ಟದ ಫಾರ್ಮಸಿ ಶಿಕ್ಷಣ ನೀಡುವಲ್ಲಿ ನಮ್ಮ ಸಂಸ್ಥೆಗಳು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ.  ವಿಶ್ವದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರಿಗೆ ಹೆಚ್ಚಿನ ಬೇಡಿಕೆ ದೊರೆಯುತ್ತದೆ ಎಂದು ವಿವರಿಸಿದರು.

ಶಿಕ್ಷಕರ ಚುನಾವಣೆಯಲ್ಲಿ ಭಾಗವಹಿಸಿ
ಮೈಸೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣೆ ಜು.20 ರಂದು ನಡೆಯಲಿದ್ದು, ಸಂಘದ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎ.ಆರ್.ಗೋಪಿನಾಥ್ ಮನವಿ ಮಾಡಿದ್ದಾರೆ. ರಾಜ್ಯ ಪ್ರೌಢಶಾಲಾ ಸಹ- ಶಿಕ್ಷಕರ ಸಂಘವು ಸರ್ಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಪ್ರೌಢಶಾಲೆಗಳ ಎಲ್ಲ ಸಹ ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗೆ ಸದಾ ಹೋರಾಡುತ್ತಿದೆ. ಆದರೆ ಕೆಲವು ಅವಕಾಶ ವಂಚಿತರು ಸಂಘದಲ್ಲಿ ಒಡಕುಂಟು ಮಾಡುವ ಉದ್ದೇಶದಿಂದ ಮತ್ತು ಪ್ರೌಢಶಾಲಾ ಸಹ ಶಿಕ್ಷಕರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಕಂಡುಬಂದಿದೆ. ಆದ್ದರಿಂದ ಸಹ ಶಿಕ್ಷಕರು ಇಂತಹ ಹೇಳಿಕೆಗೆ ಕಿವಿಗೊಡದೆ ಜು.20 ರಂದು ನಂಜನಗೂಡು ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಉಪ ವಿಭಾಗಾಧಿಕಾರಿ ದಾಳಿ, ಅಕ್ರಮ ಮರಳು ವಶ
ಹುಣಸೂರು: ತಾಲೂಕಿನ ಆಯರಹಳ್ಳಿ ಬಳಿಯ ಕೆಆರ್ಎಸ್ ಹಿನ್ನೀರಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ್ದ 50 ಲೋಡ್ ಮರಳನ್ನು ಉಪ ವಿಭಾಗಾಧಿಕಾರಿ ಹಾಗೂ ಮೈಸೂರು ದಕ್ಷಿಣ ವಲಯ ಡಿವೈಎಸ್ಪಿ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಆಯರಹಳ್ಳಿ, ಹಾರುವಳ್ಳಿ ಗ್ರಾಮಗಳಲ್ಲಿ ಕೆಲ ಗ್ರಾಮಸ್ಥರೆ ದೋಣಿ ಮತ್ತಿತರ ಪರಿಕರ ಬಳಸಿ ಮರಳನ್ನು ನದಿಯಿಂದ ಮೇಲೆತ್ತಿ ಹೊಲ, ಹಿತ್ತಲಿನಲ್ಲಿ ತೆಂಗಿನಗರಿ ಮುಚ್ಚಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹುಣಸೂರು ಎಸಿ ಜಗದೀಶ್ ಹಾಗೂ ಮೈಸೂರು ದಕ್ಷಿಣ ವಲಯ ಡಿವೈಎಸ್ಪಿ ವಿಕ್ರಂ ಮೇಟಿ ನೇತೃತ್ವದ ತಂಡ ಗುರುವಾರ ರಾತ್ರಿ ದಾಳಿ ನಡೆಸಿ ಮರಳು ವಶಪಡಿಸಿಕೊಂಡಿತು. ಕಾರ್ಯಾಚರಣೆಯಲ್ಲಿ ಬಿಳಿಕೆರೆ ಉಪ ತಹಸೀಲ್ದಾರ್ ಹನುಮೇಗೌಡ, ಆರ್ಐ ನಿಸಾರ್, ಗ್ರಾಮ ಲೆಕ್ಕಾಧಿಕಾರಿ ನಿತಿನ್, ನಾಗೇಂದ್ರ, ಶ್ಯಾಮ್ ಹಾಗೂ ಲೋಕೋಪಯೋಗಿ ಇಲಾಖೆ ಎಇ ಅಸೀಬ್ ಇದ್ದರು.
ಕಾರಿನ ಗಾಜು ಜಖಂ: ಮರಳನ್ನು ವಶಪಡಿಸಿಕೊಳ್ಳುವ ವೇಳೆ ಗ್ರಾಮಸ್ಥರು ತಡೆಯೊಡ್ಡಿದರು. ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವರು ಲಾರಿ, ಕಾರೊಂದರ ಗಾಜನ್ನು ಜಖಂಗೊಳಿಸಿದರು.

ಸೌಲಭ್ಯ ಕಲ್ಪಿಸಲು ಆಗ್ರಹ
ಹುಣಸೂರು: ಪಟ್ಟಣದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಕನಿಷ್ಠ ಸೌಲಭ್ಯ ನೀಡದಿದ್ದರೆ ಪುರಸಭೆಗೆ ಮುತ್ತಿಗೆ ಹಾಕುವುದಾಗಿ ಹೌಸಿಂಗ್ ಬೋರ್ಡ್ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಪ್ರಭಕಾರ್ ಆರೋಪಿಸಿದರು. 2ನೇ ಹಂತದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಸಮರ್ಪಕ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಇಡಿ ಬಡಾವಣೆ ಗಬ್ಬೆದ್ದು ನಾರುತ್ತಿದೆ. 35 ವರ್ಷಗಳ ಹಿಂದೆ ನಿರ್ಮಿಸಿರುವ ಒಳಚರಂಡಿ ಹಾಗೂ ರಸ್ತೆಯ ಜಲ್ಲಿ ಕಿತ್ತುಹೋಗಿದ್ದು ಜನತೆ- ವಾಹನ ಸವಾರರು ತಿರುಗಾಡಲು ಹರಸಾಹಸ ಪಡಬೇಕಿದೆ. ಹಲವು ಬಾರಿ ಪುರಸಭೆಗೆ ಮನವಿ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ನಗರೋತ್ಥಾನ ಯೋಜನೆಯಡಿ 3 ವರ್ಷಗಳಿಂದ 15 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಹಲವಾರು ಕಾಮಗಾರಿ ನಡೆಯುತ್ತಿದ್ದರೂ ಈ ಬಡಾವಣೆಯಲ್ಲಿ ಈವರೆಗೆ ಯಾವುದೆ ಕಾಮಗಾರಿ ಕೈಗೊಂಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಆಟೋಚಾಲಕ- ಮಾಲಿಕರ ಸಂಘದ ಕಾರ್ಯದರ್ಶಿ ಸನಾವುಲ್ಲಾ, ಬಸವರಾಜು, ರಾಜಶೇಖರ್ ಇದ್ದರು.

ಗ್ರೀನ್ಬಡ್ಸ್ ಏಜೆಂಟರಿಗೆ ತೊಂದರೆ ನೀಡಬೇಡಿ- ಎಸ್ಪಿ
ಮೈಸೂರು: ಗ್ರೀನ್ ಬಡ್ಸ್ ಸಂಸ್ಥೆಯ ಠೇವಣಿದಾರರು ವಿನಾಕಾರಣ ಏಜೆಂಟರಿಗೆ ತೊಂದರೆ ನೀಡದಂತೆ ಎಸ್ಪಿ ಅಭಿನವ್ ಖರೆ ಕೋರಿದ್ದಾರೆ. 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಗ್ರೀನ್ ಬಡ್ಸ್ ಸಂಸ್ಥೆ, ಆರಂಭದಲ್ಲಿ ಗ್ರಾಹಕರನ್ನು ಸೆಳೆದು, ಠೇವಣಿದಾರರಿಗೆ ಕೋಟ್ಯಂತರ ರು. ವಂಚಿಸಿರುವ ಬಗ್ಗೆ ರಾಜ್ಯದ ನಾನಾ ಕಡೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಗ್ರೀನ್ ಬಡ್ಸ್ ಆಗ್ರೋ ಫಾರಂ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್ನನ್ನು ಈಗಾಗಲೇ ಬೆಂಗಳೂರಿನಲ್ಲಿ ಬಂಧಿಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹೀಗಿದ್ದರೂ ಠೇವಣಿದಾರರು ಏಜೆಂಟರಿಗೆ  ತೊಂದರೆ, ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನು ಅನ್ವಯ ಅಪರಾಧವಾಗಿರುತ್ತದೆ. ಪ್ರಕರಣಗಳು ಸಿಐಡಿ ತನಿಖೆಯಲ್ಲಿರುವುದರಿಂದ ಠೇವಣಿದಾರರು ಏಜೆಂಟರಿಗೆ ವಿನಾ ಕಾರಣ ತೊಂದರೆ ನೀಡಬಾರದು ಎಂದು ಎಸ್ಪಿ ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಗೆ ಮಗು
ಹುಣಸೂರು: ಮೂರು ದಿನಗಳ ಹಿಂದೆ 3 ವರ್ಷದ ಗಂಡು ಮಗುವನ್ನು ರಕ್ಷಿಸಿ ಜಿಲ್ಲಾ ಕಲ್ಯಾಣ ಸಮಿತಿಗೆ ಒಪ್ಪಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿರುನಾಣಿ ಗ್ರಾಮದಲ್ಲಿ ತಡವಾಗಿ ವರದಿಯಾಗಿದೆ. ಕೊಡಗು ಜಿಲ್ಲೆ ಕುಶಾಲನಗರದ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಚೇರಿಗೆ ಬಂದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕಿನ ಬಿರುನಾಣಿ ಗ್ರಾಮಕ್ಕೆ ತೆರಳಿ ಅಲ್ಲಿನ ನಿವಾಸಿ ಜಿ.ಎಂ.ಪ್ರವೀಣ್ ಎಂಬವರ ಮನೆಯಲ್ಲಿದ್ದ ಗಂಡು ಮಗುವನ್ನು ಸಂಸ್ಥೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರವೀಣ್ ಅವರು ಎರಡು ತಿಂಗಳ ಹಿಂದೆ ತಮ್ಮ ಮಗಳ ಮದುವೆ ಸಂದರ್ಭದಲ್ಲಿ ಹುಣಸೂರು ಉಪ ವಿಭಾಗದ ಎಚ್.ಡಿ.ಕೋಟೆ ತಾಲೂಕಿನ ಗ್ರಾಮ ಒಂದರಿಂದ ಮನೆ ಕೆಲಸಕ್ಕಾಗಿ ಕುಟುಂಬವೊಂದನ್ನು ಬೇರೆಯವರ ಸಹಾಯದಿಂದ ಕರೆಸಿದ್ದರು. ಇವರ ಜೊತೆ ಮೂರು ವರ್ಷದ ಗಂಡು ಮಗು ಬಂದಿತ್ತು. ಮದುವೆ ಸಡಗರ ಮುಗಿದ ನಂತರ ಕೆಲಸ ಮುಗಿಸಿಕೊಂಡು ತಮ್ಮ ಸಂಬಳ ಪಡೆದ ದಂಪತಿ ಮಗು ಬಿಟ್ಟು ತೆರಳಿದ್ದರು. ಚೈಲ್ಡ್ ಲೈನ್ ತಂಡವು ಮಗುವನ್ನು ಕರೆತಂದು ರಕ್ಷಿಸಿ, ಮಗುವಿನ ಪೂಷಣೆಯ ಉದ್ದೇಶದಿಂದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿರುವುದಾಗಿ ಚೈಲ್ಡ್ ಲೈನ್ನ ಆರ್. ಶಿರಾಜ್ ಅಹ್ಮದ್ ತಿಳಿಸಿದ್ದಾರೆ. ಈ ಮಗುವಿನ ಸಂಬಂಧಿಕರು ಇದ್ದಲ್ಲಿ ಚೈಲ್ಡ್ ಲೈನ್, ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಧೆ, ಕುಶಾಲನಗರ, ದೂ. 08276- 274937 .

ವಿದ್ಯಾರ್ಥಿ ಜೀವನ ತಪಸ್ಸಿನಂತೆ: ಪ್ರಾಂಶುಪಾಲ
ನಂಜನಗೂಡು: ವಿದ್ಯಾರ್ಥಿ ಜೀವನ ತಪಸ್ಸಿನಂತೆ. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸುವ ಮೂಲಕ ಸಮಾಜದ ಸತ್ಪ್ರಜೆಗಳಾಗಬೇಕು ಎಂದು ಪ್ರಾಂಶುಪಾಲ ಪ್ರೊ.ಕೆ. ರಾಮಮೂರ್ತಿರಾವ್ ಅಭಿಪ್ರಾಯಪಟ್ಟರು. ಪಟ್ಟಣದ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳು ನಮ್ಮ ಕಾಲೇಜಿನಲ್ಲಿವೆ. ವಿದ್ಯಾರ್ಥಿಗಳು ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು. ಪಿಯು ಕಾಲೇಜು ಪ್ರಾಂಶುಪಾಲ ಸಿ.ವಿ. ಬಸವರಾಜು, ದೈಹಿಕ ಶಿಕ್ಷಣಾಧಿಕಾರಿ ಸಿ. ಪಳನಿಸ್ವಾಮಿ, ಗ್ರಂಥಪಾಲಕ ಕೆ.ಎ. ದಯಾನಂದ, ಪರಶಿವಮೂರ್ತಿ ಇದ್ದರು. ಎಸ್.ಎನ್. ನಿರ್ಮಲಾದೇವಿ ಸ್ವಾಗತಿಸಿದರು. ಪಿ. ನಿರ್ಮಲ ಪ್ರಾರ್ಥಿಸಿದರು. ಮೋಹನ್ಸಿಂಗ್ ವಂದಿಸಿದರು.

ಗಿಡ ನೆಟ್ಟು ಪರಿಸರ ಉಳಿಸುವಂತೆ ಕರೆ
ಹುಣಸೂರು: ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜಮೀನಿನಲ್ಲಿ ಹಾಗೂ ತಮ್ಮ ಮನೆಗಳ ಮುಂದೆ ಗಿಡ ನೆಟ್ಟು ಪರಿಸರ ಉಳಿಸಲು ಮುಂದಾಗಬೇಕು ಎಂದು ಉದ್ಯಮಿ ಡಾ. ತೊಂಡಾಳು ನಾಗೇಗೌಡ ಕರೆ ನೀಡಿದರು. ತಾಲೂಕಿನ ಮುಳ್ಳೂರು ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರಗಿಡ ನೆಡುವುದರಿಂದ ಇಂಗಾಲ ಡೈ ಆಕ್ಸಡ್ ಹೀರಿಕೊಂಡು ಆಮ್ಲಜನಕ  ಬಿಡುಗಡೆ ಮಾಡುತ್ತದೆ. ಇದರಿಂದ ಪರಿಸರವೂ ಚೆನ್ನಾಗಿರುತ್ತದೆ. ನಾವು ಬದುಕಬಹುದು ಎಂದರು. ಇದೇ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲು ವಿವಿಧ ಜಾತಿಯ 60 ಸಸಿಗಳನ್ನು ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಪಾಪಣ್ಣ, ಮುಖ್ಯಶಿಕ್ಷಕ ಮೋಹನ್ಕುಮಾರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹುಣಸೂರು ಅಧ್ಯಕ್ಷ ಆತಿಕುಪ್ಪೆ ಮೋಹನ್ಕುಮಾರ್, ಪ್ರಾಥಮಿಕ ಶಾಲಾ ಎಸ್ಡಿಎಂಸಿ ಆಧ್ಯಕ್ಷ ಗೋವರ್ಧನ್, ಸದಸ್ಯರಾದ ನಾಗರಾಜರಾವ್, ಕುಮಾರಸ್ವಾಮಿ, ಮಂಜುಳಾ, ಶಿವಲಿಂಗೇಗೌಡ, ಮೋಹನ್ಕುಮಾರ್, ಶಿಕ್ಷಕರಾದ ಮಧು, ಶ್ಯಾಂ, ಪ್ರೇಮಕುಮಾರಿ, ನಿಯೋಜಿ ಬೇಗಂ, ಶಿವಕುಮಾರ್, ಮುಖಂಡರಾದ ವೆಂಕೋಬರಾವ್, ವಿಠಲ್ರಾವ್ ಇದ್ದರು.

ಏಕಾಗ್ರತೆಯಿಂದ ಸಾಧನೆ ಸಾಧ್ಯ: ಪ್ರೊ. ಗಿರಿಗೌಡ
ಪಿರಿಯಾಪಟ್ಟಣ: ಏಕಾಗ್ರತೆಯ ಮೂಲಕ ಏನು ಬೇಕಾದರೂ ಸಾಧಿಸಬಹುದು ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ನೀ. ಗಿರಿಗೌಡ ಹೇಳಿದರು. ತಾಲೂಕಿನ ಬೆಟ್ಟದಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಹಾಗೂ ಮೈಸೂರಿನ ಶ್ರೀದೇವಿ ಡೆವಲಪರ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ  ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಮೊದಲು ಏಕಾಗ್ರತೆ ಇರಬೇಕು. ನಮ್ಮ ಯಶಸ್ಸಿಗೆ ನಾವೇ ಕಾರಣ ಹೊರತು ಬೇರೆ ಯಾರೂ ಕಾರಣರಾಗಲು ಸಾಧ್ಯವಿಲ್ಲ. ಇದನ್ನು ವಿದ್ಯಾರ್ಥಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಾಷೆ, ಬದುಕು, ಶಿಕ್ಷಣ ಈ ಮೂರೂ ಜೀವನದಲ್ಲಿ ಬಹಳ ಅಮೂಲ್ಯವಾದದ್ದು, ಇವನ್ನು ಯಾರು ಸಂಪಾದಿಸುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು. ಕಸಾಪ ತಾ. ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾತು. ಮೈಸೂರಿನ ಶ್ರೀದೇವಿ ಡೆವಲಪರ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ವ್ಯಾಕರಣದ ಪುಸ್ತಕಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com