ವರುಣ: ನಮ್ಮ ತಾಲೂಕಿನವರು ಮೈಮುರಿದು ದುಡಿಯುತ್ತಾರೆ, ಹೊಟ್ಟೆ ಬಿರಿಯೇ ಉಣ್ಣುತ್ತಾರೆ, ಕಣ್ಣು ಬಿರಿಯೇ ನಿದ್ರಿಸುತ್ತಾರೆ. ಆದರೆ, ಊಟದಲ್ಲಿ ಪರಿಪೂರ್ಣ ಆರೋಗ್ಯದ ಕಲ್ಪನೆ ಇಲ್ಲ. ಮಾಡುವ ನಿದ್ರೆಯಲ್ಲಿ ತಮ್ಮ ಬದುಕಿನ, ತಮ್ಮ ಮಕ್ಕಳ ಭವಿಷ್ಯದ ಕನಿಸಿರುವುದಿಲ್ಲ ಎಂದು ಸಮ್ಮೇಳನಾಧ್ಯಕ್ಷ ಮಾನಸ ತಾಲೂಕಿನ ಬವಣೆ ಬಗೆಗೆ ಮರುಕಪಟ್ಟರು. ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನನ್ನ ಮಾತುಗಳು ಅತ್ಯಂತ ನಿಷ್ಟುರವಾಗಿವೆ. ಯಾಕೆಂದರೆ ತಾಲೂಕಿನಿಂದ ಹಲವು ವಿವಾಹ ಪತ್ರಿಕೆಗಳು ಬಂದಾಗ ಬಹಳಷ್ಟು ಬಾಲ್ಯ ವಿವಾಹಗಳಾಗಿರುತ್ತವೆ. ಅದಕ್ಕೆ ಕಾರಣ ಕೇಳಿದರೆ ಅಪ್ಪ ಅಮ್ಮನಿಗೂ, ಅಜ್ಜ, ಅಜ್ಜಿಗೂ ವಯಸ್ಸಾಗಿದೆ ಅಂತೆಲೋ, ಆರೋಗ್ಯ ಸರಿಯಿಲ್ಲ ಅಂತಲೋ ಹೇಳುತ್ತಾರೆ. ನಮ್ಮ ತಾಲೂಕಿನ ಬಹುತೇಕ ಹೆಣ್ಣು ಮಕ್ಕಳು ಪ್ರೌಢಶಾಲೆಯನ್ನೂ ದಾಟಿರುವುದಿಲ್ಲ ಎಂದು ವಿಷಾದಿಸಿದರು. ಇನ್ನು ಗಂಡು ಮಕ್ಕಳ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಈ ಪರಿಸ್ಥಿತಿಯಿಂದ ನಾವು ಹೊರಬರಬೇಕಾಗಿದೆ ಎಂದರು. ಇನ್ನಾದರೂ ಮೌಢ್ಯದಿಂದ ಹೊರಬನ್ನಿ. ನಿಮ್ಮೂರಿನ ಜ್ಯೋತಿಷಿಗಳನ್ನೋ, ಜೋಯಿಸರನ್ನೋ ಕೇಳಿ ನಿಮ್ಮ ಮಕ್ಕಳ ಭವಿಷ್ಯ ನಿರ್ಧರಿಸುವುದನ್ನು ಬಿಡಿ. ಕೇವಲ ಹಣದಿಂದ ಎಲ್ಲವನ್ನೂ ಕೊಳ್ಳಲು ಆಗುವುದಿಲ್ಲ. ಮಕ್ಕಳಿಗೆ ಆಸ್ತಿ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡದೆ, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸುವುದರತ್ತ ಗಮನ ಹರಿಸಿ ಎಂದು ಮಾನಸ ಕರೆ ನೀಡಿದರು.