ಹೊಗೆ... ಹೊಗೆ...

Updated on: 

ಮೈಸೂರು: ಸಾರ್ವಜನಿಕರು ಕಸವನ್ನು ಬೀದಿಗೆ ಹಾಕಿದರೆ ಅಥವಾ ಅದಕ್ಕೆ ಬೆಂಕಿ ಹಾಕಿದರೆ ಕಾನೂನಿನಲ್ಲಿ ದಂಡ ಹಾಕಲು ಅವಕಾಶವಿದೆ. ಆದರೆ, ಇಂತಹ ನಿಯಮವನ್ನೂ ರೂಪಿಸಿ ಹತ್ತು ವರ್ಷಗಳೇ ಕಳೆದರೂ ನಗರ ಪಾಲಿಕೆ ಇದನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಗಿಲ್ಲ ಹಾಗೂ ನಾಗರಿಕರು ಇದನ್ನು ಪಾಲಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ.
ಮನೆ ಮುಂಭಾಗ ಗುಡಿಸಿದ ಕಸವನ್ನೋ ಅಥವಾ ಗೃಹ ಬಳಕೆಯಿಂದ ಉತ್ಪತ್ತಿಯಾಗುವ ಕಸದ ರಾಶಿಗೋ ಬೆಂಕಿ ಹಾಕುವುದನ್ನು ನಾನಾ ಬಡಾವಣೆಗಳಲ್ಲಿ ಕಾಣಬಹುದು. ಇಂತಹ ಕೆಲಸ ಕೇವಲ ನಾಗರಿಕರಿಂದ ಮಾತ್ರ ನಡೆಯುತ್ತಿಲ್ಲ. ಪಾಲಿಕೆಯ ವತಿಯಿಂದ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಂದಲೂ ನಡೆಯುತ್ತಿದೆ.         
ಧಾರ್ಮಿಕ ಕಾರ್ಯಕ್ರಮದ ವೇಳೆ ಪೂಜೆಗಾಗಿ ಸಾಂಬ್ರಾಣಿ ದೂಪ ಹಾಕಲಾಗುವುದು. ಕೆಲವರು ಮನೆಯೊಳಗೆ ಸೊಳ್ಳೆ ಮತ್ತಿತರ ಕ್ರಿಮಿ ಕೀಟಗಳನ್ನು ಹೊರ ಹಾಕುವ ಸಲುವಾಗಿಯೂ ದೂಪ ಹಾಕುವುದಿದೆ. ಹೋಮ ಹವನಗಳನ್ನು ನಡೆಸುವಾಗಲು ಇಂತಹ ಹೊಗೆಯನ್ನು ಕಾಣಬಹುದು. ಆದರೆ ಅವುಗಳಲ್ಲಿ ಔಷಧಯುಕ್ತ  ಮರಗಿಡಗಳ ಗಡ್ಡಿಗಳು, ತುಪ್ಪ, ತೈಲ ಮತ್ತಿತರ ವಸ್ತುಗಳನ್ನು ಹಾಕುವುದರಿಂದ ಆರೋಗ್ಯಕ್ಕೆ ಪೂರಕವಾಗಲಿದೆ.
ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಆ ಕಸದಲ್ಲಿರುವ ಕೊಳಕು ವಸ್ತುಗಳು ಹಾಗೂ ರಾಸಾಯನಿಕ ಪದಾರ್ಥಗಳಿಗೆ ಬೆಂಕಿ ತಾಗಿ ಅವು ಹೊರ ಸೂಸುವ ಹೊಗೆ ಸೇವಿಸಿದಾಗ ಅನಾರೋಗ್ಯಕ್ಕೆ ಕಾರಣವಾಗದಿರದು. ವಾಹನ ಸೂಸುವ ಹೊಗ ಎಷ್ಟು ಅಪಾಯಕಾರಿಯೋ ಹಾಗೆಯೇ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಹೊರ ಬರುವ ಹೊಗೆಯೂ ಪರಿಸರಕ್ಕೆ ಅಷ್ಟೇ ಹಾನಿಕರ. ಈ ಕಾರಣದಿಂದ ಕಸಕ್ಕೆ ಬೆಂಕಿ ಹಾಕುವುದನ್ನು ಪಾಲಿಕೆಯೂ ನಿರ್ಬಂಧಿಸಿದೆ.
ಪ್ರಜ್ಞಾವಂತರೇ ಹೆಚ್ಚಾಗಿ ವಾಸಿಸುವ ಕುವೆಂಪುನಗರದ ಪ್ರಮುಖ ರಸ್ತೆಗಳಲ್ಲಿಯೂ ಬೆಂಕಿ ಹಾಕುವ ದೃಶ್ಯ ಕಾಣಬಹುದು. ಕೇವಲ ಆ ಭಾಗದಲ್ಲಿ ಮಾತ್ರವಲ್ಲ. ನಗರದ ಎಲ್ಲ ವಾರ್ಡ್‌ಗಳಲ್ಲಿಯೂ ಇಂತಹ ದೃಶ್ಯ ಇಲ್ಲವೆನ್ನುವಂತಿಲ್ಲ. ಆದ್ದರಿಂದ ಜನರು ಎಚ್ಚೆತ್ತುಕೊಂಡು ಕಸಕ್ಕೆ ಬೆಂಕಿ ಹಾಕದೆ ಪರಿಸರ ಸ್ನೇಹಿಗಳಾಗಬೇಕು. ಆಟೊ ಟಿಪ್ಪರ್ ಅಥವಾ ಟ್ರ್ಯಾಕ್ಟರ್ ಬಂದಾಗ ಕಸವನ್ನು  ಕೊಡುವ ಕೆಲಸ ಮಾಡಬೇಕು. ಇಲ್ಲವೇ ಕಸದ ತೊಟ್ಟಿಗೆ ತಂದು ಹಾಕುವ ಕೆಲಸ ಮಾಡಬೇಕು ಆ ಮೂಲಕ ಸಹಕರಿಸಬೇಕು.
ಸಾರ್ವಜನಿಕ ಬೀದಿಗಳನ್ನು ಗುಡಿಸಿದಾಗ ಬರುವ ಕಸಕ್ಕೆ ಅಥವಾ ಬಡಾವಣೆಗಳಲ್ಲಿನ ಗಿಡಗಂಟಿಗಳನ್ನು ಕಿತ್ತು ಸ್ವಚ್ಛ ಮಾಡುವ ಪೌರಕಾರ್ಮಿಕರು ಅದನ್ನು ಅಲ್ಲಿಯೇ ಗುಡ್ದೆ ಹಾಕಿ ಬೆಂಕಿ ಹಾಕುತ್ತಾರೆ. ಈ ಸಿಬ್ಬಂದಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು.
ಕುವೆಂಪನಗರ ಉತ್ತರ ಎಂಬ ಹೆಸರಿನ ವಾರ್ಡ್ ಸಂಖ್ಯೆ 21ರ ವ್ಯಾಪ್ತಿಯು ಉತ್ತರಕ್ಕೆ ಸಾಹುಕಾರ್ ಚೆನ್ನಯ್ಯ ರಸ್ತೆಯಲ್ಲಿ ಟಿ.ಕೆ. ಬಡಾವಣೆಯ ಹತ್ತಿರ ಇರುವ ಅರಳಿ ಮರದ ಬಿಂದುವಿನಿಂದ ಸಾಹುಕಾರ್ ಚೆನ್ನಯ್ಯ ರಸ್ತೆ ಮೂಲಕ ವಿಶ್ವಮಾನವ ಜೋಡಿ ರಸ್ತೆಯವರೆಗೆ. ಅಲ್ಲಿಂದ ಕಾಮಾಕ್ಷಿ ಆಸ್ಪತ್ರೆ ರಸ್ತೆಯಿಂದ ಸರಸ್ವತಿಪುರಂ  4ನೇ ಮುಖ್ಯ ರಸ್ತೆಯವರೆಗೆ. ಪೂರ್ವಕ್ಕೆ ಸರಸ್ವತಿಪುರಂ 4ನೇ ಮುಖ್ಯ ರಸ್ತೆಯಿಂದ ನ್ಯೂಕಾಂತರಾಜ ಅರಸ್ ರಸ್ತೆಯರೆಗೆ. ದಕ್ಷಿಣಕ್ಕೆ ನ್ಯೂಕಾಂತರಾಜ ಅರಸ್ ರಸ್ತೆ ಮತ್ತು ಸರಸ್ವತಿಪುರಂ ರಸ್ತೆಗಳು ಸೇರುವ ರಸ್ತೆಯಿಂದ ವಿಶ್ವಮಾನವ ಜೋಡಿರಸ್ತೆಯಿಂದ ನಿಜಲಿಂಗಪ್ಪ ವೃತ್ತದ ಬಿಂದುವರೆಗೆ. ಅಲ್ಲಿಂದ ಪಡುವಣ ರಸ್ತೆ ಮತ್ತು ವಿಶ್ವಮಾನವ ಜೋಡಿ ರಸ್ತೆ ಸೇರುವ ಬಿಂದುವರೆಗೆ.  ಪಶ್ಚಿಮಕ್ಕೆ ವಿಶ್ವಮಾನವ ಜೋಡಿರಸ್ತೆ, ಪಡುವಣ ರಸ್ತೆ ಸೇರುವ ಬಿಂದುವಿನಿಂದ ಟಿ.ಕೆ. ಬಡಾವಣೆ 4ನೇ ಹಂತದ 13ನೇ ಅಡ್‌ಡರಸ್ತೆಯವರೆಗೆ. ಅಲ್ಲಿಂದ 4ನೇ ಮುಖ್ಯರಸ್ತೆ, 9ನೇ ಅಡ್‌ಡರಸ್ತೆ ಬಿಂದುವರೆಗೆ. ಟಿ.ಕೆ ಬಡಾವಣೆಯ ರಾಮಮಂದಿರ ರಸ್ತೆಯ ಮೂಲಕ ಸಾಹುಕಾರ್ ಚೆನ್ನಯ್ಯ ರಸ್ತೆ ಬಳಿ ಇರುವ ಅರಳಿ ಮರದ ಬಿಂದುವರೆಗೆ ಒಳಗೊಂಡಿದೆ.   
ಈ ಭಾಗದಲ್ಲಿ ಸುಮಾರು ಸುಮಾರು 11 ಸಾವಿರ ಜನಸಂಖ್ಯೆಯಿದ್ದು, ಸುಮಾರು 2300 ಮನೆಗಳು ಹಾಗೂ 150 ಕ್ಕೂ ಅಧಿಕ ಉದ್ದಿಮೆಗಳಿವೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರತಿದಿನ ಕಸಕ್ಕೆ ಬೆಂಕಿ ಹಾಕಲಾಗುತ್ತಿದೆ. ಇದರಿಂದ ಕಕ್ಷಿದಾರರು ಹಾಗೂ ವಕೀಲರು ಅಲ್ಲದೆ ಕೆಲವೊಮ್ಮೆ ನ್ಯಾಯಾಧೀಶರು ಸಹ ತೊಂದರೆ ಅನುಭವಿಸುವಂತಾಗಿದೆ. ಕಸಕ್ಕೆ ಬೆಂಕಿ ಹಾಕುವುದು ತುಂಬ ಅಪಾಯಕಾರಿ. ಇದರ ಹೊಗೆ ಸೇವನೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಪಾಲಿಕೆಯು ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿ ಅರಿವು ಮೂಡಿಸಬೇಕು. ಇದನ್ನು ತಪ್ಪಿಸಲು ನಿಯಮ ರೂಪಿಸಬೇಕು.
- ಪಿ.ಜೆ. ರಾಘವೇಂದ್ರ, ನ್ಯಾಯವಾದಿ


-ಮಾ. ವೆಂಕಟೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com