ಪಿರಿಯಾಪಟ್ಟಣ: ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ದಯಾಮರಣ ವಿಚಾರವಾಗಿ ಪಟ್ಟಣದ ಯಜಮಾನ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಿಬ್ಬೆರಗಾಗಿಸುವಂತೆ ವಿಚಾರದ ಪರ ಹಾಗೂ ವಿರುದ್ದ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೊರ ಹಾಕಿದರು.
ಕಾಲೇಜು ಮಟ್ಟದಲ್ಲಿ ಏರ್ಪಡಿಸಿದ್ದ ದಯಾಮರಣ ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಇರಬೇಕೇ ಬೇಡವೇ ಎಂಬ ವಿಚಾರವಾಗಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಪರ ಹಾಗೂ ವಿರುದ್ಧವಾಗಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಚಾರ ಮಂಡಿಸಿದರು.
ಕೆಲವು ವಿದ್ಯಾರ್ಥಿಗಳು ದಯಾಮರಣ ನೀಡಬೇಕು ಎಂಬ ವಿಚಾರವಾಗಿ ವಿಷಯ ಪ್ರಸ್ತಾಪಿಸಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಅದರಲ್ಲಿಯೂ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ದಾಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ತಜ್ಞರ ಸಮಿತಿಯ ಆಧಾರದ ಮೇಲೆ ಅವರಿಗೆ ದಯಾಮರಣ ಕರುಣಿಸಬೇಕು ಎಂದು ವಾದಿಸಿದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ದಯಾಮರಣ ನೀಡುವುದು ಸೂಕ್ತವಲ್ಲ. ಈ ಕಾನೂನು ಜಾರಿಯಾದಲ್ಲಿ ಅನುಕೂಲಗಳಿಗಿಂತ ಅನಾನುಕೂಲವೇ ಹೆಚ್ಚಾಗುತ್ತದೆ ಅಲ್ಲದೆ, ಕಾನೂನು ದುರ್ಬಳಕೆಯಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಯಾಮರಣದ ಅರ್ಜಿಗಳು ಬಂದಲ್ಲಿ ಪೂರ್ವಪರ ತನಿಖೆ ನಡೆಸಿ, ಅಗತ್ಯ ಬಿದ್ದಲ್ಲಿ ಸೂಕ್ತ ಚಿಕಿತ್ಸೆ ರೋಗಿಗಳಿಗೆ ಕೊಡಿಸುವ ಮೂಲಕ ಅವರಿಗೆ ಬದುಕಿನ ಬಗ್ಗೆ ಆತ್ಮಸ್ತೈರ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಕೆಲಸ ಕೈಗೊಳ್ಳಬೇಕು. ಜಗತ್ತಿನಲ್ಲಿ ಜೀವರಾಶಿಗಳು ಕೇವಲ ಜನ್ಮ ನೀಡಬಹುದು, ಆದರೆ ಜೀವ ನೀಡಲು ಸಾಧ್ಯವಿಲ್ಲ ಹೀಗಿರುವಾಗ ದಯಾಮರಣ ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಹೆಚ್ಚಿನವರು ಬೆಂಬಲ ವ್ಯಕ್ತಪಡಿಸಿದರು.
ಪಪಂ ಸದಸ್ಯ ವೇಣುಗೋಪಾಲ್, ಕಾಲೇಜಿನ ಪ್ರಾಂಶುಪಾಲ ಪಿ.ಎನ್. ನಾಗಪ್ರಶಾಂತ್, ಉಪನ್ಯಾಸಕರಾದ ಶಫೀ, ಪಿ.ಎನ್. ನಾಗನಂದಿನಿ, ಮಧುಕುಮಾರಿ, ಪರಮೇಶ್, ಪತ್ರಕರ್ತರಾದ ಎಚ್.ವೈ. ನಂಜುಂಡಸ್ವಾಮಿ, ನವೀನ್ಕುಮಾರ್ ಇದ್ದರು.