ನೀರನ್ನು ಮಿತವಾಗಿ ಬಳಸಲು ಮನವಿ

Updated on: 

ಕೆ.ಆರ್. ನಗರ:  ರೈತರು ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ಬಿಟ್ಟು, ತಮಗೆ ಅಗತ್ಯವಿರುವಷ್ಟನ್ನು ಬಳಕೆ ಮಾಡಿಕೊಂಡು ಇತರ ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ದೊರಕುವಂತೆ ಮಾಡಬೇಕೆಂದು ಶಾಸಕ ಸಾ.ರಾ. ಮಹೇಶ್ ಮನವಿ ಮಾಡಿದರು.
ತಾಲೂಕಿನ ಬಳ್ಳೂರು ಗ್ರಾಮದ ಬಳಿ ಇರುವ ಕಾವೇರಿ ಅಣ್ಣೆಕಟ್ಟೆಯಿಂದ ತಾಲೂಕು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಾಮರಾಜ, ರಾಮಸಮುದ್ರ ಮತ್ತು ಮಿರ್ಲೆ ಶ್ರೇಣಿ ನಾಲೆಗಳ ಆಧುನೀಕರಣ ಕಾಮಗಾರಿ ಈಗಾಗಲೇ ಶೇ.75 ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಜನವರಿ ತಿಂಗಳಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಚಾಮರಾಜ ಎಡ ಮತ್ತು ಬಲ ದಂಡ ನಾಲೆಗಳ 25 ಸಾವಿರ ಎಕರೆಗೆ ರಾಮಸಮುದ್ರ ಮತ್ತು ಮಿರ್ಲೆ ಶ್ರೇಣಿ ನಾಲೆಗಳ ತಲಾ 7 ಸಾವಿರ ಎಕರೆ ಭೂ ಪ್ರದೇಶಕ್ಕೆ ನಾಲೆಗಳಿಂದ ನೀರಿನ ಅನುಕೂಲ ದೊರಯಲಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಂಡು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಕೃಷಿ ಚಟುವಟಿಕೆ ಆರಂಭಿಸಬೇಕೆಂದು ಅವರು ಸಲಹೆ ನೀಡಿದರು.
ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ನೀರು ಸಮಪರ್ಕವಾಗಿ ಹರಿಸುವುದರ ಜೊತೆಗೆ, ನಾಲೆಗಳ ಕೊನೆಯ ಭಾಗದವರೆಗೂ ನೀರು ತಲುಪಿಸಬೇಕೆಂದು ತಾಕೀತು ಮಾಡಿದ ಶಾಸಕರು, ಹಾರಂಗಿ ಮತ್ತು ಕಟ್ಟೆಪುರ ನಾಲೆಗಳಿಗೂ ಶೀಘ್ರದಲ್ಲಿಯೇ ನೀರು ಹರಿಸಲು ಅಧಿಕಾರಿಗಳ ಸಭೆ ನಡೆಸಿ ಎಂದು ಹಾರಂಗಿ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಚೌಡೇಗೌಡ ಅವರಿಗೆ ಸೂಚಿಸಿದರು.
ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಾನು ಮತ್ತು ಸಂಸದ ಸಿ.ಎಸ್. ಪುಟ್ಟರಾಜು ಮಾಡುತ್ತಿದ್ದೇವೆ, ಆದರೆ ಕೆಲವು ಕಾಣದ ಕೈಗಳು ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹವಣಿಸುತ್ತಿದ್ದು, ಇದಕ್ಕೆ ತಾವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವುದರಿಂದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವ ಹೆಚ್ಚಿನ ಜವಾಬ್ದಾರಿ ಅವರ ಮೇಲೆ ಇದ್ದು, ಸಿದ್ದರಾಮಯ್ಯನವರು ಈ ಕಾರ್ಖಾನೆಯ ವಿಚಾರದ ಬಗ್ಗೆ ಗಂಭೀರವಾಗಿ ಆಲೋಚಿಸಿ, ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಒತ್ತಾಯಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಹಾರಂಗಿ ನೀರು ಬಳಕೆದಾರರ ಸಹಕಾರ ಮಹಾ ಮಂಡಳದ ಅಧ್ಯಕ್ಷ ಚೌಡೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಧುಚಂದ್ರ, ನಿರ್ದೇಶಕ ಸೋಮು, ಹೊಸೂರು ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ. ಕೀರ್ತಿ, ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ರಾಜಣ್ಣ, ಮಧುಚಂದ್ರ, ಕಾರ್ಯಪಾಲಕ ಎಂಜಿನಿಯರ್ ರಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಬಿ. ಪ್ರಕಾಶ್, ಬಸವರಾಜು, ರಂಗಸ್ವಾಮಿ, ಮಂಜುನಾಥ್, ಕಿರಿಯ ಎಂಜಿನಿಯರ್ ಸಿದ್ದೇಶ್ವರಪ್ರಸಾದ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com