ಕಾಮುಕರನ್ನು ಮಟ್ಟಹಾಕಿ

Updated on: 

ಮೈಸೂರು: ರಾಜ್ಯಾದ್ಯಂತ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಅತ್ಯಾಚಾರವನ್ನು ಖಂಡಿಸಿ ವನಿತಾ ಮಹಿಳಾ ಸಮಾಜದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಮಹಿಳೆಯರು ಸ್ವತಂತ್ರವಾಗಿ ನಿರ್ಭೀತಿಯಿಂದ ಬದುಕಲು, ಓಡಾಡಲು, ತಮ್ಮ ಕಾಯಕ ಮಾಡಲು ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು. ವನಿತಾ ಮಹಿಳಾ ಸಮಾಜದ ಅಧ್ಯಕ್ಷೆ ಜೆ. ವರಲಕ್ಷ್ಮಿ, ಕಾರ್ಯದರ್ಶಿ ವೀಣಾವತಿ, ಮುಖಂಡರಾದ ಎ. ಮಹದೇವಮ್ಮ, ಎಂ.ಪಿ. ಸುಮನ್, ಖುತೇಜಾಬಿ, ಅಸಿನಾ ಬಾನು, ಪದ್ಮ, ಪ್ರಭಾವತಿ, ಪದ್ಮಮ್ಮ ಇದ್ದರು.
ಧ್ವನಿ ಮಹಿಳಾ ಒಕ್ಕೂಟ: ಬಾಲಕಿಯರು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಧ್ವನಿ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಯವರು ಗಾಂಧಿ ಚೌಕದಲ್ಲಿ ಬುಧವಾರ ಸಂಜೆ ಪ್ರತಿಭಟಿಸಿದರು.
ಮುಖಂಡರಾದ ಸಾಯೀನ್ ತಾಜ್, ಯತಿರಾಜ್, ಗಾಯತ್ರಿ, ಆಶಾ, ಲೀಲಾ ಇದ್ದರು.
ಟೆರೀಷಿಯನ್ ವಿದ್ಯಾರ್ಥಿನಿಯರು: ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರವನ್ನು ಖಂಡಿಸಿ ಟೆರೀಷಿಯನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಬುಧವಾರ ಜಾಥಾ ಹಮ್ಮಿಕೊಂಡಿದ್ದರು. ಸಿದ್ದಾರ್ಥನಗರದ ಕಾಲೇಜಿನಿಂದ ಹೊರಟ ಈ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಸಂಸ್ಥೆಯ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯಾಚಾರ ಎಸಗುವವರಿಗೆ ಹಾಗೂ ಅಂತಹ ಪ್ರಯತ್ನ ನಡೆಸುವವರಿಗೆ ಕಠಿಣ ಶಿಕ್ಷೆ ಆಗಬೇಕು. ಜೊತೆಗೆ ಅತ್ಯಾಚಾರಿಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ಜೆಡಿಎಸ್ ಕೃಷ್ಣರಾಜ ಬ್ಲಾಕ್‌ನ ಅಧ್ಯಕ್ಷ ಎಂ. ಬಸವರಾಜು ಆಗ್ರಹಿಸಿದ್ದಾರೆ.
ಸರಣಿ ಪ್ರತಿಭಟನೆಗಳು ಇಂದು
ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ಒಡಿಪಿ ಸಂಘಟನೆಯು ಜು.24ರ ಬೆಳಗ್ಗೆ 10.30ಕ್ಕೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ಆಯೋಜಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಜೆಡಿಎಸ್ ಮಹಿಳಾ ಘಟಕವು ಜು.24ರ ಬೆಳಗ್ಗೆ 10ಕ್ಕೆ ಗಾಂಧಿ ಚೌಕದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ದಸರೆಗೆ ಕಾರ್ನಾಡ್ ಬೇಡ: ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನಿಸಿರುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆಯವರು ಜು.24ರ ಬೆಳಗ್ಗೆ 11ಕ್ಕೆ ಕಾಡಾ ಆವರಣದಲ್ಲಿರುವ ಜಿಲ್ಲಾ ಉಸ್ತುವಾರಿ ಕಚೇರಿ ಎದುರು ಪ್ರತಿಭಟಿಸಲಿದ್ದಾರೆ. ಮೈಸೂರು ಅರಮನೆ ದಕ್ಷಿಣ ದ್ವಾರದಲ್ಲಿ ಅನಧಿಕೃತ ಗೂಡಂಗಡಿಗಳಿಂದ ಅರಮನೆ ಭದ್ರತೆಗೆ ಅಪಾಯಕಾರಿ ಹಾಗೂ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದು, ಇವುಗಳನ್ನು ತೆರವುಗೊಳಿಸಲು ಆಗ್ರಹಿಸಿ ಮೈಸೂರು ರಕ್ಷಣಾ ವೇದಿಕೆಯವರು ಜು.24ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com