ಮಾ. ವೆಂಕಟೇಶ್
ಮೈಸೂರು: ಆಯಾಯ ದಿನ ಸಂಗ್ರಹಿಸುವ ಕಸವನ್ನು ವಿಲೇವಾರಿ ಮಾಡುವುದು ಸೂಕ್ತ. ಅದನ್ನು ವಾರ್ಡ್ನಲ್ಲಿಯೇ ರಾಶಿ ಹಾಕಿಕೊಳ್ಳುವುದರಿಂದ ಪರಿಸರಕ್ಕೂ ಹಾನಿ ಹಾಗೂ ಜನರ ಆರೋಗ್ಯಕ್ಕೂ ಮಾರಕ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಕಸವನ್ನು ಸಮಯಕ್ಕೆ ಸರಿಯಾಗಿ ತೆರವು ಮಾಡದೇ ಹೋದರೆ ಕೊಳೆತು ನಾರುವ ಸಾಧ್ಯತೆ ಇದ್ದು, ಅದರಿಂದ ಜನರ ಆರೋಗ್ಯದ ಮೇಲೂ ಹಾನಿ ಉಂಟಾಗುವ ಸಾಧ್ಯತೆ ಇದೆ.
25ನೇ ವಾರ್ಡ್ಗೆ ಸೇರಿರುವ ಮಂಚೇಗೌಡನ ಕೊಪ್ಪಲು ಮೈಸೂರಿನ ಹಳೆಯ ಬಡಾವಣೆಗಳಲ್ಲಿ ಒಂದು. ಇಲ್ಲಿ ಪಶು ಸಾಕಣೆಯೂ ಇರುವುದರಿಂದ ಹಲವು ಮನೆಗಳ ಮುಂದೆ ಸಗಣಿ, ಹುಲ್ಲು ಮತ್ತಿತರ ರಾಶಿಯನ್ನು ಕಾಣಬಹುದು. ಇದರ ಜತೆಗೆ ಹೊಸದಾಗಿ ಬೆಳೆದಿರುವ ಸಮೀಪದ ಬಡಾವಣೆಗಳಲ್ಲಿ ಅಂಗಡಿ, ಮುಂಗಟ್ಟುಗಳು ಹೆಚ್ಚಾಗಿರುವ ಕಾರಣ ತ್ಯಾಜ್ಯದ ಸಮಸ್ಯೆ ಅಧಿಕ ಎನ್ನಬಹುದು.
ಈ ವಾರ್ಡ್ನ ಹೆಸರು ಮಂಚೇಗೌಡನಕೊಪ್ಪಲು ಎಂತಾಗಿದ್ದರೂ ಇದರ ವ್ಯಾಪ್ತಿಯೂ ಅಷ್ಟಕ್ಕೆ ಸೀಮಿತವಾಗಿಲ್ಲ. ವಿಜಯನಗರ ಹಾಗೂ ಹೆಬ್ಬಾಳು ಬಡಾವಣೆಯ ಭಾಗವೂ ಸೇರಿದೆ. ಇಲ್ಲಿನ ಕೊಡವ ಸಮಾಜ, ಕೆನರಾ ಬ್ಯಾಂಕ್, ಸಂಗಮ ವೃತ್ತ, ಮಯೂರ ವೃತ್ತ ಹಾಗೂ ಅಭಿಷೇಕ್ ವೃತ್ತಗಳ ಬಳಿ ಕಸದ ತೊಟ್ಟಿ ಇರಿಸಲಾಗಿದೆ. ಕೇವಲ 5 ಕಡೆ ಮಾತ್ರ ಕಂಟೈನರ್ ಇರಿಸಿರುವುದು ಸಾಲದು. ಪ್ರದೇಶ ವಿಸ್ತಾರವಾಗಿರುವುದರಿಂದ ಇನ್ನೂ 5 ಕಂಟೈನರ್ ಬೇಕು ಎನ್ನುವುದು ನಿವಾಸಿಗಳ ಬೇಡಿಕೆ.
25ನೇ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ವಿಜಯನಗರ ರಿಂಗ್ ರಸ್ತೆ ಬಿಂದುವಿನಿಂದ ಹೆಬ್ಬಾಳ್ ಮುಖ್ಯರಸ್ತೆಯ ಕೆಇಬಿ ಕಚೇರಿ ಬಿಂದುವರೆಗೆ. ಪೂರ್ವಕ್ಕೆ ಹೆಬ್ಬಾಳ್ ಮುಖ್ಯರಸ್ತೆಯ ಕೆಇಬಿ ಕಚೇರಿ ಬಿಂದುವಿನಿಂದ ಮಾದೇಗೌಡ ವೃತ್ತದ 80 ಅಡಿ ರಸ್ತೆ ಮಾರ್ಗವಾಗಿ ಹೈಟೆನ್ಷನ್ ರಸ್ತೆ ಮೂಲಕವಾಗಿ ಕನ್ನಡ ಸಾಹಿತ್ಯ ಭವನದ ರಸ್ತೆಯಿಂದ ವಿಜಯನಗರ 1ನೇ ಹಂತ 10ನೇ ಅಡ್ಡ ರಸ್ತೆಯವರೆಗೆ. ದಕ್ಷಿಣಕ್ಕೆ ಕನ್ನಡ ಸಾಹಿತ್ಯ ಭವನದಿಂದ ಕಾರ್ಪೊರೇಷನ್ ಬ್ಯಾಂಕ್ ರಸ್ತೆ ಮಾರ್ಗವಾಗಿ ನಗರ ಪಾಲಿಕೆ ಸರಹದ್ದಿನವರೆಗೆ. ಪಶ್ಚಿಮಕ್ಕೆ ಕಾರ್ಪೊರೇಷನ್ ಬ್ಯಾಂಕ್ ರಸ್ತೆ ಬಿಂದುವಿನಿಂದ ಯೋಗನರಸಿಂಹ ಸ್ವಾಮಿ ದೇವಸ್ಥಾನದ ರಸ್ತೆ, ಕೃಷ್ಣದೇವರಾಯ ವೃತ್ತ, ವಿಜಯನಗರ ಹೈಟೆನ್ಷನ್, ರಿಂಗ್ ರಸ್ತೆ ಮಾರ್ಗವಾಗಿ ಹೆಬ್ಬಾಳ್ 2ನೇ ಹಂತ ಜೋಡಿರಸ್ತೆಯ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 13 ಸಾವಿರ ಜನಸಂಖ್ಯೆ, 3100 ಮನೆಗಳು ಹಾಗೂ 800 ಕ್ಕೂ ಅಧಿಕ ಉದ್ದಿಮೆಗಳಿವೆ. ಕಲ್ಯಾಣ ಮಂಟಪ ಹಾಗೂ ಮಾಂಸಹಾರಿ ಹೊಟೇಲ್ಗಳು ಇರುವುದರಿಂದ ತ್ಯಾಜ್ಯ ಉತ್ಪಾದನೆ ಹೆಚ್ಚು. ಇಲ್ಲಿ ಸಂಗ್ರಹಿಸುವ ಕಸವನ್ನು ಎಕ್ಸೆಲ್ ಪ್ಲಾಂಟ್ಗೆ ರವಾನಿಸಲಾಗುವುದು. ಇಲ್ಲಿನ ಕಸವನ್ನು ಇದೇ ಭಾಗದಲ್ಲಿ ಸಂಸ್ಕರಿಸುವ ಸಲುವಾಗಿ ಸ್ಥಾಪಿಸುವ ಶೂನ್ಯಕಸ ನಿರ್ವಹಣಾ ಘಟಕದ ಸ್ಥಾಪನೆಗೆ ಇಲ್ಲಿನ ಜನರ ವಿರೋಧವಿದೆ ಎನ್ನುತ್ತಾರೆ ಸ್ಥಳೀಯ ನಗರ ಪಾಲಿಕೆ ಸದಸ್ಯರು.