ಮೈಸೂರು: ಸಾರ್ವಜನಿಕ ಪೂಜಾ ಸ್ಥಳದಲ್ಲಿ ಪೂಜೆ ಹೆಸರಿನಲ್ಲಿ ಪ್ರಾಣಿ ಬಲಿ ಮಾಡುವುದು ಅಪರಾಧವಾಗಿದ್ದು, ಸಾರ್ವಜನಿಕರು ಶಾಶ್ವತವಾಗಿ ಇಂತಹ ಬಲಿಗಳನ್ನು ನಿಲ್ಲಿಸುವುದು ಅಗತ್ಯ ಎಂದು ವಿದ್ಯಾರಣ್ಯಪುರಂನ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಚಾಲಕ ಜಿ.ಎಸ್. ಜೈನ್ ಹೇಳಿದ್ದಾರೆ. ಮೂಢ ನಂಬಿಕೆಗಳನ್ನು ಹೋಗಲಾಡಿಸಿ, ಫಲಪುಷ್ಪಾದಿಗಳ ಮೂಲಕ ದೇವರ ಪೂಜೆ ಮಾಡುವುದು, ಎಲ್ಲರಿಗೂ ಹಿತಕರ. ಎಲ್ಲ ಸಮುದಾಯದವರು ತಮ್ಮ ಪದ್ಧತಿಯನುಸಾರವಾಗಿ ಪೂಜಾದಿ ಕೈಂಕರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ. ಪ್ರಾಣಿಗಳ ವಧೆಯಿಂದ ರಕ್ತಾದಿಗಳು ಚೆಲ್ಲಿ ಪೂಜಾಸ್ಥಳ ಅಪವಿತ್ರವಾಗುತ್ತ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಚಾಮುಂಡಿ ಬೆಟ್ಟದ ಪಾದದ ಬಳಿ ನಡೆಯುತ್ತಿದ್ದ ಪ್ರಾಣಿಗಳ ಬಲಿಯನ್ನು ಪೊಲೀಸ್ ಸಿಬ್ಬಂದಿ, ಪ್ರಾಣಿ ದಯಾ ಸಂಘ ಹಾಗೂ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ತಡೆಯಲಾಯಿತು ಎಂದು ಅವರು ಹೇಳಿದ್ದಾರೆ.