ಪ್ಲಾಸ್ಟಿಕ್ ವಿರಾಟರೂಪ

Updated on: 

 ಮಾ. ವೆಂಕಟೇಶ್
ಮೈಸೂರು: ಹೆಬ್ಬಾಳು ಈ ಹಿಂದೆ ಮೈಸೂರಿನ ಅತಿದೊಡ್ಡ ನಗರ ಪಾಲಿಕೆ ವಾರ್ಡ್ ಆಗಿತ್ತು. ನಂತರ ವಾರ್ಡ್‌ಗಳ ಪುನರ್‌ವಿಂಗಡಣೆ ವೇಳೆ 34ನೇ ಸಂಖ್ಯೆಯ ವಾರ್ಡ್ ಅನ್ನು ಮೂರು ವಿಭಾಗಗಳನ್ನಾಗಿ ಮಾಡಿ, ಮಂಚೇಗೌಡನಕೊಪ್ಪಲು ವಾರ್ಡ್ ಸಂಖ್ಯೆ 25, ಹೆಬ್ಬಾಳು ಲೋಕನಾಯಕನಗರ ವಾರ್ಡ್ ಸಂಖ್ಯೆ 26 ಹಾಗೂ ಹೆಬ್ಬಾಳು ಲೋಕನಾಯಕನಗರ ವಾರ್ಡ್ ಸಂಖ್ಯೆ 27 ಎಂದು ರಚಿಸಲಾಗಿದೆ.
ಹೆಬ್ಬಾಳು ಲೋಕನಾಯಕನಗರ ಹೆಸರಿನ 27ನೇ ವಾರ್ಡ್‌ನಲ್ಲಿ ಹೆಬ್ಬಾಳು ಮುಖ್ಯರಸ್ತೆಯಲ್ಲಿ ಮದ್ಯದಂಗಡಿ, ಬಾರ್ ಹಾಗೂ ಮಾಂಸಹಾರಿ ಹೋಟೆಲ್‌ಗಳು, ಮಾಂಸ ಮಾರಾಟ ಕೇಂದ್ರ, ಹಾರ್ಡ್‌ವೇರ್, ಬಟ್ಟೆ, ದಿನಸಿ ಸೇರಿದಂತೆ ಇನ್ನಿತರ ಮಳಿಗೆಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಇದು ವಾಣಿಜ್ಯ ಕೇಂದ್ರವೂ ಆಗಿರುವುದರಿಂದ ಹೆಚ್ಚಿನ ತ್ಯಾಜ್ಯ ಉತ್ಪಾದನಾ ತಾಣವೂ ಆಗಿದೆ. ನಿವಾಸಿಗಳು ಹಾಗೂ ವ್ಯಾಪಾರಸ್ಥರು ಕಸವನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕುವ ಬದಲು ರಸ್ತೆ ಬದಿಯಲ್ಲೋ ಅಥವಾ ಖಾಲಿ ಜಾಗಗಳಲ್ಲೋ ಹಾಕುತ್ತಾರೆ. ಇಂತಹ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್‌ನ ವಿರಾಟ ರೂಪ ತಾಂಡವವಾಡುತ್ತಿವೆ. ಮನೆಯಲ್ಲಿ ಬಳಕೆಯ ನಂತರ ಉತ್ಪಾದನೆಯಾಗುವ ತರಕಾರಿ ಸಿಪ್ಪೆಗಳನ್ನು ಹಾಗೂ ತಂಗಳು ಅನ್ನವನ್ನು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಇಂತಹ ಜಾಗದಲ್ಲಿ ಹಾಕುತ್ತಾರೆ. ಈ ವ್ಯಾಪ್ತಿಯಲ್ಲಿ ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು ಹಾಗೂ ಮೇಟಗಳ್ಳಿ ಹತ್ತಿರ ಇರುವುದರಿಂದ ಮೇವಿಗಾಗಿ ಬಿಡುವ ಪಶುಗಳು ಪ್ಲಾಸ್ಟಿಕ್‌ನೊಳಗಿನ ಪದಾರ್ಥವನ್ನು ತಿನ್ನಲು ಹೋಗಿ ಪ್ಲಾಸ್ಟಿಕ್ ಕವರನ್ನು ತಿನ್ನುವಂತಾಗಿದೆ. ಇದು ಹಸುಕರುಗಳ ಕರುಳಿಗೆ ಸುತ್ತಿಕೊಂಡು ಸಾವಿಗೀಡಾಗಿರುವ ಉದಾಹರಣೆಗಳಿವೆ.
ನಗರ ಪ್ಲಾಸ್ಟಿಕ್ ಮುಕ್ತವೇ?: ಮೈಸೂರನ್ನು ಪ್ಲಾಸ್ಟಿಕ್ ಮುಕ್ತನಗರವೆಂದು ಪಾಲಿಕೆ ಘೋಷಿಸಿದ್ದರೂ, ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಇದು ಕಸದ ಸಮಸ್ಯೆಗೂ ಬಹುದೊಡ್ಡ ತೊಡಕಾಗಿರುವ ಕಾರಣ, ಇಂತಹ ಪ್ಲಾಸ್ಟಿಕ್ ಕವರುಗಳ ಬಳಕೆಯನ್ನು ಸಮರ್ಪಕವಾಗಿ ನಿಷೇಧಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದಾಗ ಮಾತ್ರ ಪರಿಸರದ ಹಾನಿ ತಪ್ಪಿಸಲು ಸಾಧ್ಯ. ಈ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ವರ್ತುಲ ರಸ್ತೆ ಜೆ.ಕೆ. ಟೈರ್ಸ್ ಲಿಂಕ್ ಬಿಂದುವಿನಿಂದ ವರ್ತುಲ ರಸ್ತೆ ಮಾರ್ಗವಾಗಿ ಸಂಜೀವಿನಿ 2ನೇ ಮುಖ್ಯರಸ್ತೆ ಬಿಂದುವರೆಗೆ. ಪೂರ್ವಕ್ಕೆ ವರ್ತುಲ ರಸ್ತೆಯ ಬಿಂದುವಿನಿಂದ ಸಂಜೀವಿನ 2ನೇ ಮುಖ್ಯರಸ್ತೆ ಮಾರ್ಗವಾಗಿ ಕುಂಬಾರಕೊಪ್ಪಲು 60 ಅಡಿ ರಸ್ತೆಬಿಂದು. ದಕ್ಷಿಣಕ್ಕೆ ಸಂಜೀವಿನಿ 2ನೇ ಮುಖ್ಯರಸ್ತೆ ಬಿಂದು 60 ಅಡಿರಸ್ತೆ ಮಾರ್ಗವಾಗಿ ವಿಜಯನಗರ ರೈಲ್ವೆ ಬಡಾವಣೆಯ ಗಡಿ ಭಾಗದ ಮಾರ್ಗವಾಗಿ ಕನ್ನಡ ಸಾಹಿತ್ಯ ಭವನ ರಸ್ತೆ ಬಿಂದುವಿನಿಂದ ವಿಜಯನಗರ ಹೈಟೆನ್ಷನ್ ರಸ್ತೆ 80 ಅಡಿರಸ್ತೆ ಬಿಂದುವರೆಗೆ. ಪಶ್ಚಿಮಕ್ಕೆ ವಿಜಯನಗರ ಹೈಟೆನ್ಷನ್ ರಸ್ತೆ ಬಿಂದುವಿನಿಂದ 80 ಅಡಿರಸ್ತೆ ಮಾರ್ಗವಾಗಿ ಮಾದೇಗೌಡ ವೃತ್ತ ಮಾರ್ಗವಾಗಿ ಹೆಬ್ಬಾಳ್ 1ನೇ ಹಂತ 9ನೇ ಮುಖ್ಯರಸ್ತೆ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 11ಸಾವಿರ ಜನಸಂಖ್ಯೆ, 2600 ಮನೆಗಳು ಹಾಗೂ 1400 ಕ್ಕೂ ಅಧಿಕ ಉದ್ದಿಮೆಗಳಿವೆ.
ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸಿದ್ದರೂ ಅದರ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಕಸದ ಸಮಸ್ಯೆಗೆ ಪ್ರಮುಖವಾದುದು ಪ್ಲಾಸ್ಟಿಕ್ ಕವರ್‌ಗಳು. ಇದು ಮಣ್ಣಿನಲ್ಲಿ ಕರಗದ ಕಾರಣ ಪರಿಸರಕ್ಕೆ ಹಾನಿಕರ. ಅಲ್ಲದೆ ಪಶುಗಳಿಗೂ ಮಾರಕವಾಗಿವೆ. ತ್ಯಾಜ್ಯದ ನಿರ್ವಹಣೆಗೆ ಪ್ರತಿ ತಿಂಗಳು ನಗರಪಾಲಿಕೆಯು 1.5 ಕೋಟಿ ವೆಚ್ಚ ಮಾಡುತ್ತಿದೆ. ಜನರ ತೆರಿಗೆ ಹಣ ಸಾರ್ಥಕವಾಗಬೇಕಾದರೆ ಮೊದಲು ಪ್ಲಾಸ್ಟಿಕ್ ಬಳಕೆ ತಪ್ಪಿಸಬೇಕು. ಸರ್ಕಾರ ಈ ದಿಸೆಯಲ್ಲಿ ಗಂಭೀರವಾಗಿ ಚಿಂತಿಸಬೇಕು.
ಟಿ ಕೆ.ಟಿ. ಚಲುವೇಗೌಡ, ವಾರ್ಡ್ 27, ನಗರಪಾಲಿಕೆ ಸದಸ್ಯರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com