ನಂಜನಗೂಡು: ಕೇರಳದ ವಯನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ತುಂಬಿರುವ ಹಿನ್ನೆಲೆ ಕಪಿಲಾ ನದಿಗೆ ನೀರು ಹರಿದು ಬರುತ್ತಿದ್ದು, ಇದರಿಂದ ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ.
19 ಟಿಎಂಸಿ ನೀರು ಸಂಗ್ರಹ ಹೊಂದಿರುವ ಕಬಿನಿ ಜಲಾಶಯದಿಂದ ಇಲ್ಲಿಯವರೆಗೆ ಸುಮಾರು 1.40 ಲಕ್ಷ ಕ್ಯುಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿದ್ದು, ಇದರಿಂದ ಮುಡಿಕಟ್ಟೆ ಮಂಟಪ, ಪರಶುರಾಮಕ್ಷೇತ್ರ ಗೋಳೂರು ನೀರೆತ್ತುವ ಯಂತ್ರಗಾರ, ದೇವಾಲಯದ ಹಿಂಭಾಗದ ಗುಂಡ್ಲಾ ನದಿ ನೀರಿನ ಹರಿವಿನಿಂದ ಸುತ್ತುವರಿದಿದೆ. ಈ ಬಾರಿ ಜಲಾಶಯ ಭರ್ತಿಯಾದ ಹಿನ್ನೆಲೆ ತುಂಬಿ ಹರಿಯುತ್ತಿರುವ ಕಪಿಲಾ ಪ್ರವಾಸಿಗರನ್ನು ಆಕರ್ಷಿಸಿದೆ.
ಕಪಿಲಾ ನದಿ ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ಆಸ್ತಿ, ಪ್ರಾಣ ಹಾನಿಯಾಗದಂತೆ ತಾಲೂಕು ಆಡಳಿತ ಮುಂಜಾಗ್ರತೆ ಕೈಗೊಂಡಿದೆ. ತಹಸೀಲ್ದಾರ್ ರಾಮಪ್ಪ, ಎಎಸ್ಪಿ ಡಾ.ಪಿ.ರಾಜ, ಸರ್ಕಲ್ ಇನ್ಸ್ಪೆಕ್ಟರ್ ಜಿ.ಎಸ್. ರಘು, ಎಸ್ಐ ಚೇತನ್ ಹಾಗೂ ಕಂದಾಯ ಇಲಾಖೆ ನೌಕರರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಪಾತ್ರದಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡಲು ಮುಂದಾಗಿದ್ದಾರೆ.