ಜೆ. ಮಹದೇವ
ಮೈಸೂರು: ಹಸಿ ಬತ್ತ- ಬಿಸಿ ಬೆಲ್ಲದ ನಾಡು ಎಂಬ ಖ್ಯಾತಿಯ ಬನ್ನೂರು ಪಟ್ಟಣದಲ್ಲಿ ಏರ್ಪಡಿಸಿರುವ ಎರಡು ದಿನಗಳ ಮೈಸೂರು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು.
ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ನಿರ್ಮಿಸಿರುವ ವ್ಯಾಸರಾಜರ ವೇದಿಕೆಯು ಅಕ್ಷರ ಜಾತ್ರೆಗೆ ಮುನ್ನುಡಿ ಬರೆಯಿತು. ನಾಡಿನ ಸಾಹಿತ್ಯ ಲೋಕದ ಘಟಾನುಘಟಿಗಳೇ ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಹಿರಿಮೆ- ಗರಿಮೆ ಸಾರಿ ಹೇಳಲಾಯಿತು.
ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ನಾಡಿನ ಹಿರಿಯ ಸಾಹಿತಿ, ನಾಡೋಜ ಡಾ.ದೇಜಗೌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವಿಕೆಯಲ್ಲಿ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ವ್ಯಾಸರಾಜರ ಹುಟ್ಟೂರು ಎಂಬ ಐತಿಹ್ಯ ಹಿನ್ನೆಲೆಯುಳ್ಳ ಬನ್ನೂರಿನಲ್ಲಿ ಸಮ್ಮೇಳನ ನಡೆಸಿರುವುದು ಹೆಮ್ಮೆಯ ವಿಷಯ. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಸಾಹಿತ್ಯದ ಓದು ಬದುಕಿಗೆ ಅವಶ್ಯಕವಾದದು. ಬಸವೇಶ್ವರರು ಸಾಹಿತ್ಯದಿಂದಲೇ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ಯತ್ನಿಸಿದರು ಎಂದರು.
ದೇಶದ ಬೇರೆಲ್ಲ ಭಾಷೆಗಳಿಗಿಂತ ಕನ್ನಡ ಹಿರಿದು. ಕನ್ನಡ ಸಾಹಿತ್ಯವೂ ಶ್ರೀಮಂತವಾದದು. ಇಂಗ್ಲಿಷ್ನಲ್ಲಿ ಹುಡುಕಿದರೂ ಎರಡು ಮಹಾಕಾವ್ಯ ಸಿಗುವುದಿಲ್ಲ. ಆದರೆ, ನಮ್ಮಲ್ಲಿ 60ಕ್ಕೂ ಹೆಚ್ಚು ಮಹಾಕಾವ್ಯಗಳು ಸಿಗುತ್ತವೆ. ಬಸವೇಶ್ವರರು ಹುಟ್ಟುಹಾಕಿದ ವಚನ ಸಾಹಿತ್ಯ ಸಿಗುತ್ತದೆ. ಸ್ತ್ರೀಯರಿಗೂ ಸಮಾನತೆ ನೀಡಿರುವುದನ್ನು ವಚನಗಳು ತಿಳಿಸುತ್ತವೆ. ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಟ್ಟು ಸಂರಕ್ಷಿಸಬೇಕು. ಸರ್ಕಾರವೂ ಸಹ ಕನ್ನಡವನ್ನು ಹೃದಯ ಭಾಷೆ ಎಂದು ತಿಳಿಯಬೇಕಾದ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.
ಪುಸ್ತಕ ಬಿಡುಗಡೆ: ಇದೇ ವೇಳೆ ಯಕ್ಷಗಾನ ತಜ್ಞ ಜಿ.ಎಸ್.ಭಟ್ಟ ಅವರ ಹವ್ಯಕರು, ಮಲೆನಾಡಿನ ಅಸಲರು, ಶಿರಸಿ ಶ್ರೀ ಮಾರಿಕಾಂಬೆ, ಎ.ಮಹದೇವಪ್ಪ ಅವರ ಮನೆಮದ್ದು, ಡಾ.ಎ. ಗಾಯತ್ರಿ ಅವರ ಕನ್ನಡ ವಚನಕಾರ್ತಿಯರು ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಂರಕ್ಷಿಸುವ ಕಾಯಕದಲ್ಲಿ ತೊಡಗಿದೆ ಎಂದರು.ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸದ ಆರ್.ಧ್ರುವನಾರಾಯಣ, ಶಾಸಕ ಆರ್.ಧರ್ಮಸೇನ, ಮಾಜಿ ಶಾಸಕ ಎಸ್. ಕೃಷ್ಣಪ್ಪ, ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಶಿವಕುಮಾರಸ್ವಾಮಿ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಜಿಪಂ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು, ಕಸಾಪ ಪದಾಧಿಕಾರಿಗಳು ಇದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌ. ಜಿಪಂ ಸದಸ್ಯರಾದ ರೇಣುಕಾ ನಾಗರಾಜು, ಎಂ.ಬಿ, ಸಿದ್ದೇಗೌಡ, ಟಿ.ನರಸೀಪುರ ತಾಪಂ ಅಧ್ಯಕ್ಷೆ ಸುಧಾ ನಾಗಣ್ಣ, ಪುರಸಬಾಧ್ಯಕ್ಷ ಅಜೀಜುಲ್ಲಾ, ಉಪಾಧ್ಯಕ್ಷ ಬಿ.ಎಸ್.ರವೀಂದ್ರಕುಮಾರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಗೌ. ಕೋಶಾಧ್ಯಕ್ಷ ರಾಜಶೇಖರ ಕದಂಬ, ಚಾಮರಾಜ ಕ್ಷೇತ್ರ ಕಸಾಪ ಅಧ್ಯಕ್ಷ ಕೆ.ಎಸ್.ಶಿವಾರಮು, ಮೈಸೂರು ತಾ. ಅಧ್ಯಕ್ಷ ಶಿವಮೂರ್ತಿ ಕಾನ್ಯ, ಟಿ.ನರಸೀಪುರ ತಾಲೂಕು ಅಧ್ಯಕ್ಷ ಮ.ರ. ನಾಗೇಂದ್ರಕುಮಾರ್, ಪುರಸಭೆಯ ಸದಸ್ಯರು ಇದ್ದರು.