ದಸರಾ ಕಾಮಗಾರಿ ಕಡೆಗಣನೆ

Updated on: 

ಡಿ.ಎನ್. ಮಹೇಂದ್ರ
ಕ.ಪ್ರ. ವಾರ್ತೆ, ಮೈಸೂರು, ಜು.30
ನಾಡಹಬ್ಬ ದಸರಾ ಆರಂಭಕ್ಕೆ 55 ದಿನಗಳು ಮಾತ್ರ ಬಾಕಿ ಉಳಿದಿವೆ. ಆದರೂ ಜಿಲ್ಲಾಡಳಿತವಾಗಲಿ ಅಥವಾ ನಗರ ಪಾಲಿಕೆ ಆಗಲಿ ಈವರೆಗೂ ತಲೆ ಕೆಡಿಸಿಕೊಂಡಿಲ್ಲ.
ಆಗಸ್ಟ್ ಮೊದಲ ವಾರದಲ್ಲಿ ಆನೆಗಳನ್ನು ನಾಗರಹೊಳೆಯ ವೀರನಹೊಸಹಳ್ಳಿಯಿಂದ ಮೈಸೂರಿಗೆ ಕರೆ ತರಲಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಆನೆಗಳ 2ನೇ ತಂಡ ಮೈಸೂರಿಗೆ ಬರಲಿದೆ. ಕಡೆ ವಾರದಲ್ಲಿ ದಸರಾ ಉದ್ಘಾಟನೆಗೊಳ್ಳುತ್ತದೆ. ಅಕ್ಟೋಬರ್ ಮೊದಲ ವಾರದಲ್ಲಿ ದಸರಾ ನಡೆಯುತ್ತದೆ. ಆದರೂ ಯಾರೊಬ್ಬರೂ ಈ ಬಗ್ಗೆ ಎಚ್ಚರಿಕೆ ವಹಿಸಿಲ್ಲ.
ಪ್ರತಿ ವರ್ಷದಂತೆ ರಾಜ್ಯ ಸರ್ಕಾರ ದಸರಾ ಹಿನ್ನೆಲೆಯಲ್ಲಿ 12 ಕೋಟಿ ಅನುದಾನ ನೀಡುತ್ತಿದೆ. ಇದರ ಜೊತೆಗೆ ಪ್ರಾಯೋಜಕತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೂ ಕಾಮಗಾರಿಗಳೆಲ್ಲ ವಿಳಂಬವಾಗಿ ಆರಂಭವಾಗುತ್ತವೆ. ಜಡ್ಡು ಹಿಡಿದ ಅಧಿಕಾರಿಗಳು, ಮೈ ಮರೆತು ಕುಳಿತ ಜನಪ್ರತಿನಿಧಿಗಳ ನಿರ್ಲಕ್ಷ್ಯದ ನಡುವೆ ಮತ್ತೊಂದು ಜಂಬೂಸವಾರಿ ನಡೆದು ಹೋಗುತ್ತದೆ.
ಕಳೆದ ಬಾರಿ ದಸರಾ ವೇಳೆಯಲ್ಲಿಯೆ ರಾಜಮಾರ್ಗ ಕಾಮಗಾರಿ ಆರಂಭವಾಗಿ ಹಾರ್ಡಿಂಜ್ ವೃತ್ತದಿಂದ ಅರಮನೆ ಉತ್ತರ ದ್ವಾರದವರೆಗಿನ ಒಂದು ಭಾಗ ಮಾತ್ರ ಪೂರ್ಣಗೊಂಡಿತ್ತು. ಈ ಬಾರಿ ಕೆ.ಆರ್. ವೃತ್ತ ತಲುಪಿದೆ. ಮುಂದಿನ ದಸರಾ ವೇಳೆಗೆ ಅದು ನಗರ ಪಾಲಿಕೆ ಕಚೇರಿ ಮುಟ್ಟಬಹುದು. ಆದರೆ ಕಾಮಗಾರಿಯ ಕಳಪೆಯಿಂದಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕೆಲವು ಕಂಬಗಳು ಮುರಿದು ಬಿದ್ದಿವೆ. ರಸ್ತೆಗಳಲ್ಲಿ ತಿರುಗಾಡಲು ಆಗದ ಪರಿಸ್ಥಿತಿ ಇದೆ. ರಸ್ತೆಗಳು ಗುಂಡಿ ಬಿದ್ದಿವೆ. ಅನೇಕ ಮಂದಿ ಪ್ರವಾಸಿಗರು ಬಿದ್ದು ಗಾಯಗೊಂಡಿದ್ದಾರೆ.
ಬಾಯ್ತೆರೆದ ಮ್ಯಾನ್ಹೋಲ್: ಗನ್ಹೌಸ್ ಸಮೀಪ ಕಂಡುಬಂದಿದೆ ಎನ್ನಲಾದ ಸುರಂಗ ಮಾರ್ಗ, ಹಾರ್ಡಿಂಜ್ ವೃತ್ತದ ಬಳಿಯ ಗುಂಡಿ ಬಿದ್ದ ರಸ್ತೆಗಳು, ಅಲ್ಲಲ್ಲಿ ಬಾಯ್ತೆರುದುಕೊಂಡ ಮ್ಯಾನ್ ಹೋಲ್ಗಳು, ವಿವಿಧ ಕಾಮಗಾರಿಗಾಗಿ ಅಗೆದ ರಸ್ತೆಗಳು, ಪೂರ್ಣಗೊಳ್ಳದ ಹಲವು ಅಭಿವೃದ್ಧಿ ಕಾಮಗಾರಿಗಳು ಸಿಗುತ್ತವೆ. ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಕಾಮಗಾರಿ ಹೆಸರಲ್ಲಿ ರಸ್ತೆಗೆ ತೇಪೆ ಹಾಕುವ ಕೆಲಸ ನಡೆಯುತ್ತದೆ. ತರಾತುರಿಯಲ್ಲಿ ಯಾರೊ ಬಂದು ಒಂದಷ್ಟು ಡಾಂಬರು ಬಳಿದು ಹೋಗುತ್ತಾರೆ. ಕೆಲ ಸಂಘಟನೆಗಳು ಇದನ್ನು ಖಂಡಿಸಿ ಒಮ್ಮೆ ಪ್ರತಿಭಟಿಸಿ ಸುಮ್ಮನಾಗುತ್ತಾರೆ.
ಮತ್ತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರು ದಸರಾ ಮುಗಿದ ಬಳಿಕ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿಕೆ ನೀಡುತ್ತಾರೆ. ಈ ಎಲ್ಲ ಕೆಲಸಗಳೂ ಪ್ರತಿ ವರ್ಷವೂ ಪುನರಾವರ್ತನೆ ಆಗುತ್ತಿದೆ. ಜಿಲ್ಲೆಯವರೆ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದರೂ ದಸರಾ ಕಾಮಗಾರಿಯಲ್ಲಿ ಯಾವುದೆ ಪ್ರಗತಿ ಕಂಡುಬಂದಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಸರಾ ಸಭೆ ನಡೆಸಲು ಇಂದು, ನಾಳೆ ಎಂದು ದಿನ ಎಣಿಸುತ್ತ ಕುಳಿತ್ತಿದ್ದಾರೆ. ಆದರೆ ದಸರಾಗೆ ದಿನಗಣನೆ ಆರಂಭವಾಗಿದೆ.
ಇಷ್ಟೆಲ್ಲಾ ಅವ್ಯವಸ್ಥೆಯ ನಡುವೆ ಮತ್ತೊಂದು ದಸರಾ ಪೂರ್ಣಗೊಳ್ಳುತ್ತದೆ. ಈ ದಸರಾ ವೇಳೆಗಾದರೂ ರಾಜಪಥ, ಪುರಭವನ ಕಾಮಗಾರಿ ಮತ್ತು ನರ್ಮ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಂತೂ ಇಲ್ಲ. ಈ ದಸರಾ ಮಹೋತ್ಸವವೂ ಪ್ರತಿ ವರ್ಷದಂತೆ ಅವ್ಯವಸ್ಥೆಯ ಮಧ್ಯೆದಲ್ಲಿಯೆ ನಡೆದು ಹೋಗುತ್ತದೆ. ಈಗಲಾದರೂ ಎಚ್ಚರ ವಹಿಸುವುದು ಒಳಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com