ಮೈಸೂರು: ಮಹಿಳೆ ತಮಗೆ ಅವಕಾಶ ನೀಡಿ ಎಂದು ಬೇಡುವ ಕಾಲ ಹೋಯಿತು. ತಮ್ಮ ಹಕ್ಕು ಬಾಧ್ಯತೆಗಳನ್ನು ಧಕ್ಕಿಸಿಕೊಳ್ಳುವ ಕಾಲ ಬಂದಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮೈವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಹಾಗೂ ಯುವ ಪ್ರಗತಿಪರ ಚಿಂತಕರ ಸಂಘವು ಗುರುವಾರ ಮಾನಸಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಸಮುದಾಯ- ಸವಾಲುಗಳು ಮತ್ತು ವಿಮೋಚನೆಯ ಸಾಧ್ಯತೆಗಳು ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನದ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಆದರೆ, ಎಷ್ಟು ಮಹಿಳೆಯರು ತಮ್ಮ ಇಷ್ಟದಂತೆ ಕೆಲಸ ಮಾಡುತ್ತಿದ್ದಾರೆ ಅವರಿಗೆ ಮಾತನಾಡಲು ಈ ಪುರುಷ ಸಮಾಜ ಅನುಕೂಲ ಮಾಡಿಕೊಡುತ್ತಿದೆಯೇ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕು. ಕೆಲವರು ಹೆಣ್ಣಿಗೆ ಕಣ್ಣು, ಕಿವಿ ಇದೆ. ಜೀವ ಮಾತ್ರ ಇಲ್ಲ ಎಂಬಂತೆ ತಿಳಿದಿದ್ದಾರೆ. ಹೆಣ್ಣಿನ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಪ್ರತಿಯೊಬ್ಬರ ಮನಸ್ಸು ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಇದನ್ನು ತಡೆಗಟ್ಟಬಹುದು. ಮಹಿಳೆಯರಿಗೂ ಒಂದು ಜೀವನವಿದೆ, ಬದುಕಿದೆ ಎಂದು ತಿಳಿಯಬೇಕು. ಮಹಿಳೆಯರನ್ನು ಬದಕಲು ಬಿಡಿ, ಇಲ್ಲವಾದಲ್ಲಿ ಜೈಲಿಗೆ ನಡಿ ಎಂಬ ವಾಕ್ಯವನ್ನು ಮತ್ತೆ ಮತ್ತೆ ಪುನರುಚ್ಚಿಸಬೇಕಾಗುತ್ತದೆ ಎಂದರು.
ಹೆಣ್ಣು ಮಕ್ಕಳು ತಮಗೆ ಅನ್ಯಾಯವಾದಾಗ ಮೊದಲಿಗೆ ಬರುವುದು ಪೊಲೀಸರ ಬಳಿಗೆ. ಅದರಲ್ಲೂ ಎಷ್ಟೋ ಹೆಣ್ಣು ಮಕ್ಕಳು ಪೊಲೀಸರೆಂದರೆ ಇನ್ನು ಬೆಚ್ಚಿ ಬೀಳುತ್ತಾರೆ. ಇಂತಹ ವಾತಾವರಣ ನಿವಾರಣೆಯಾಗಬೇಕು. ಅದಕ್ಕಾಗಿ ಪೊಲೀಸರು ಸಹ ಮಹಿಳೆಯರೊಂದಿಗೆ ಸ್ಪಂದಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ನಾನು ಮಾನಸಗಂಗೋತ್ರಿಯಲ್ಲಿ ಓದುವಾಗ ನಮ್ಮ ತರಗತಿಯಲ್ಲಿ ಒಬ್ಬಳೆ ಹೆಣ್ಣು ಮಗಳಿದ್ದಳು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲೆಡೆ ಮಹಿಳೆಗೆ ಪ್ರಾತಿನಿಧ್ಯ ಸಿಗುತ್ತಿದೆ. ಇದರಿಂದ ಖುಷಿ ಪಡಬೇಕಾದ ನಾವು ದಿನನಿತ್ಯ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದಿಂದ ದುಃಖ ಪಡುವಂತಾಗಿದೆ. ಮಹಿಳೆಯರು ಸಹ ಕಾನೂನು ತಿಳವಳಿಕೆ ಬೆಳೆಸಿಕೊಂಡು, ಜಾತಿ, ಧರ್ಮವನ್ನು ಮೀರಿ ಹೋರಾಟ ನಡೆಸುವಂತೆ ಕರೆ ನೀಡಿದರು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಮೈಸೂರಿನಲ್ಲಿ ಚಾಮುಂಡಿ ವನಿತಾ ಸಂಚಾರ ವಾಹನ ಆರಂಭಿಸಲಾಗಿದೆ. ಇದರಲ್ಲಿ ಮಹಿಳಾ ಸಿಬ್ಬಂದಿಯೇ ಇದ್ದು ನಗರದಲ್ಲಿ ಗಸ್ತು ತಿರುಗುವರು. ಇದರ ಜತೆಗೆ ಎಲ್ಲ ಠಾಣೆಗಳಲ್ಲಿ ಮಹಿಳೆಯರು ಬಂದರೆ ಸೂಕ್ತ ರೀತಿಯಲ್ಲಿ ವರ್ತಿಸುವಂತೆ ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಕ್ರಮ ವಹಿಸಲಾಗಿದೆ. ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನ ಚಾಲಕರಿಗೆ ಬಾಲಕಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ತರಬೇತಿ ನೀಡಲಾಗಿದೆ. ಪೊಲೀಸ್ ಠಾಣೆಗಳಲ್ಲೂ ಸಿಸಿಟಿವಿ ಅಳವಡಿಸುವ ಬಗ್ಗೆ ಚಿಂತಿಸಲಾಗಿದೆ. ಇದರಿಂದ ಪಾರದರ್ಶಕ ಆಡಳಿತ ನೀಡಲು ಸಾಧ್ಯ ಎಂಬ ಉದ್ದೇಶವಿದೆ ಎಂದರು.
ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಕಾಳೇಗೌಡ ನಾಗವಾರ, ಕೇಂದ್ರದ ಸಂಯೋಜಕ ಡಾ.ಎಸ್. ನರೇಂದ್ರಕುಮಾರ್, ಯುವ ಪ್ರಗತಿಪರ ಚಿಂತಕರ ಸಂಘದ ಅಧ್ಯಕ್ಷ ಚಂದ್ರಗುಪ್ತ ಇದ್ದರು.
ಮಹಿಳೆ ಬಲತ್ಕಾರಕ್ಕೆ, ದೌರ್ಜನ್ಯಕ್ಕೆ ಒಳಗಾದಾಗ ಹೋರಾಟ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಮಹಿಳೆಯರು ಹೋರಾಟ ಮಾಡಬೇಕೆಂದರೆ ಜಾತಿ ಎಂಬುದು ಅಡ್ಡ ಬರುತ್ತಿರುವ ಸನ್ನಿವೇಶಗಳನ್ನು ನಾವು ನೋಡುತ್ತಿದ್ದೇವೆ. ಮಹಿಳೆಯರು ಐಕ್ಯತೆಯ ಬಗ್ಗೆ ಮಾತನಾಡುವಾಗ ಒಂದು ಬಾರಿ ತಮ್ಮ ಹೃದಯವನ್ನು ಮುಟ್ಟಿ ನೋಡಿಕೊಳ್ಳುವುದು ಒಳ್ಳೆಯದು. ರೈತ ಚಳವಳಿಯಲ್ಲಿ ಅಸಂಘಟಿತ ಮಹಿಳೆಯರಿಗೆ ನೀಡಿರುವ ಸ್ಥಾನದ ಬಗ್ಗೆಯೂ ಪುನರ್ಪರಿಶೀಲನೆಯಾಗಲಿ.
- ಡಾ. ಶೈಲಜಾ, ಸಹ ಪ್ರಾಧ್ಯಾಪಕಿ